ಕಾರವಾರ: ತಂಬಾಕು ಸೇವನೆಯು ದುಶ್ಚಟಗಳ ಮೊದಲ ಹೆಜ್ಜೆಯಾಗಿದ್ದು, ತಂಬಾಕು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದುಶ್ಚಟಗಳನ್ನು ಮಕ್ಕಳು ಸಿಗರೇಟ್, ಗುಟುಕಾ ತಂಬಾಕುಗಳಿAದ ಮೊದಲು ಆರಂಭಿಸಿ ಇನ್ನಿತರ ಅನೇಕ ವ್ಯಸನೀಯಗಳಿಗೆ ಮಾರುಹೋಗುತ್ತಿದ್ದಾರೆ ಹಾಗಾಗಿ ತಂಬಾಕು ಮಾರಾಟ ನಿಯಂತ್ರಣ ಮಾಡಿದರೆ ಕೆಟ್ಟ ಅವ್ಯಾಸಗಳಿಗೆ ಬಲಿಯಾಗುವವರನ್ನು ತಡೆಯಬಹುದು ಎಂದು ಹೇಳಿದರು.
ಬಳಿಕ ಹಿರಿಯ ಸಿವಿಲ್ ನ್ಯಾಯದಿಶೆ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ರೇಣುಕಾ ಡಿ ರಾಯ್ಕರ್ ಅವರು ಮಾತನಾಡಿ, ತಂಬಾಕು ಸೇವನೆ ಮಾಡುವವರಿಗೆ 100, 200 ರೂ. ದಂಡ ವಿಧಿಸಿದರೆ ಅವರು ದಂಡವನ್ನು ನೀಡಿ ಸೇವನೆ ಮಾಡುತ್ತಾರೆ. ಆದ್ದರಿಂದ ತಂಬಾಕು ಮಾರಾಟ ಮಾಡುವ ಅಂಗಡಿಯ ಲೈಸೆನ್ಸ್ ಬಗ್ಗೆ ನಿಗಾ ವಹಿಸಿ ಹಾಗೆಯೇ ತಂಬಾಕು ಮಾರಾಟ ಮತ್ತು ಸರಬರಾಜು ಮಾಡುವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ತಂಡಗಳನ್ನು ರಚನೆ ಮಾಡಿ ಏಕ ಕಾಲಕ್ಕೆ ತಂಬಾಕು ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿಯನ್ನು ಮಾಡಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಎದುರಿಗೆ ಪೋಷಕರು ತಂಬಾಕು ಸೇವನೆ ಮಾಡುವುದರಿಂದ ಮಕ್ಕಳು ಕೂಡ ಕೆಟ್ಟ ಚಟಗಳನ್ನು ರೂಡಿಸಿಕೊಳ್ಳುತ್ತಾರೆ ಆದರಿಂದ ತಂಬಾಕು ಸೇವನೆಯಿಂದ ಆಗುವ ಪರಿಣಾಮಕಾರಿಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ಪ್ರೊಬೆಶಿನರಿ ಐಐಎಸ್ ಅಧಿಕಾರಿ ಜುಬೀನ ಮಹಾಪಾತ್ರ, ಡಿಎಚ್‌ಒ ಅನ್ನಪೂರ್ಣ ವಸ್ತ್ರದ, ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ: ಡಿಸಿ
