ಶಿರಸಿ:ತಾಲೂಕಿನ ಕರಸುಳ್ಳಿ ಗ್ರಾಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವಗೊಂಡ ಕೆರೆ ಸಮರ್ಪಣೆಯ ನಾಮಫಲಕ ಅನಾವರಣವನ್ನು ಹಾಗೂ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ ಅದೂ ಸಹ ನಮಗೆ ಅದನ್ನೇ ನೀಡುತ್ತದೆ. ಹಾಗಾಗಿ ಪರಿಸರಕ್ಕೆ ನಮ್ಮಿಂದ ಕೈಲಾದಷ್ಟು ಒಳಿತನ್ನೇ ಬಯಸೋಣ. ನೀರಿಗಾಗಿ ಬದುಕನ್ನೇ ಮೀಸಲಿಟ್ಟಿರುವ ಶ್ರೀನಿವಾಸ ಹೆಬ್ಬಾರ್ ಕೆಲಸಗಳು ಜನರಿಗೆ ಪ್ರೇರಣೆಯಾಗಿದೆ ಎಂದರು
ಪರಿಸರಕ್ಕೆ ನಾವು ಪ್ರೀತಿ ತುಂಬುವುದರಿಂದ ಅದು ಜೀವಸಂಕುಲಕ್ಕೆ ಹೆಚ್ಚಿನ ಅನುಕೂಲ ನೀಡುತ್ತದೆ. ಪರಿಸರಕ್ಕೆ ಇನ್ನಷ್ಟು ಒಳಿತನ್ನು ಮಾಡಬೇಕು. ನಮಗೆಲ್ಲ ಜೀವ ಕೊಡುವುದು ನೀರು, ನೀರಿಗೆ ಜೀವ ಕೊಡುವವರು ಶ್ರೀನಿವಾಸ ಹೆಬ್ಬಾರರು. ಇವರು ಪರಿಸರಕ್ಕೆ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಒಬ್ಬ ವ್ಯಕ್ತಿಗೆ ಸಂಕಲ್ಪ ಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ್ ಉದಾಹರಣೆ ಆಗಿದ್ದಾರೆ. ಯಾವ ಸರ್ಕಾರ, ಯಾವ ಜನಪ್ರತಿನಿಧಿಗಳೂ ಮಾಡದ ಕೆಲಸವನ್ನು ಹೆಬ್ಬಾರ್ ಅವರು ಮಾಡುತ್ತಿದ್ದಾರೆ.ಅವರ ಇಚ್ಛಾಶಕ್ತಿ ಪರಿಶ್ರಮ, ಕಾಳಜಿ ಇದಕ್ಕೆ ಕಾರಣ. ಶ್ರೀನಿವಾಸ್ ಹೆಬ್ಬಾರ್ ಅವರ ಪತ್ನಿ ಕುಟುಂಬಸ್ಥರು ಸಹ ಅವರಿಗೆ ಈ ಎಲ್ಲ ಸತ್ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆಎಂದು ಶ್ಲಾಘಿಸಿದರು.
ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಮಾರ್ಚ್ 25ರಂದು ಕರಸುಳ್ಳಿ ಕೆರೆ ಅಭಿವೃದ್ಧಿ ಕೆಲಸವನ್ನು ಪ್ರಾರಂಭ ಮಾಡಿದ್ದೆವು. ಸತತ 45 ದಿನಗಳ ಕಾಲ ಕೆಲಸ ಮಾಡಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿದ್ದೇವೆ. ಜೀವ ಜಲ ಕಾರ್ಯಪಡೆ ಆರಂಭವಾಗಲು ಮೂಲ ಕಾರಣ ರಾಜು ಮೊಗವೀರ ಅವರು, ಕಾರ್ಯಪಡೆ ಆರಂಭವಾದ 24 ಗಂಟೆಯೊಳಗೆ ನಾವು ಕೆರೆ ಅಭಿವೃದ್ಧಿ ಕೆಲಸವನ್ನು ಪ್ರಾರಂಭ ಮಾಡಿದ್ದೆವು. ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮ ಕೈಲಾದಷ್ಟು ಕೊಡುಗೆ ನೀಡಬೇಕು. ಕರಸುಳ್ಳಿ ಕೆರೆ ಅಭಿವೃದ್ಧಿ ಮಾಡುವಾಗ ಗ್ರಾಮಸ್ಥರು ಬಹಳ ಸಹಕಾರ ನೀಡಿದ್ದಾರೆ. ಮುಂದೊಂದು ದಿನ ನೀರಿಗಾಗಿ ಯುದ್ಧವಾಗುವ ಸಂಭವ ಬರಬಹುದು. ಆದ್ದರಿಂದ ನಾವು ಇಂದಿನಿಂದಲೇ ನೀರಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ಮಾನವತ್ವದ ಸೆಲೆ ಚಿಗುರಿದಾಗ ಅದು ದೈವತ್ವಕ್ಕೆ ಏರುತ್ತದೆ. 2016ರಲ್ಲಿ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಶಿರಸಿಯಲ್ಲಿ ಉಂಟಾಗಿತ್ತು. ಜಲಮೂಲಗಳನ್ನು ಮರೆತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು, ನಂತರ ಹಲವು ಬಾರಿ ಚರ್ಚೆ ನಡೆಸಿ 2017ರ ಯುಗಾದಿ ದಿನದಂದು ಆನೆಹೊಂಡ ಕೆರೆಯನ್ನು ಹೂಳೆತ್ತುವ ಮೂಲಕ ಕೆಲಸ ಪ್ರಾರಂಭ ಮಾಡಲಾಯಿತು. ಈ ಕೆಲಸಗಳು ಶ್ರೀನಿವಾಸ ಹೆಬ್ಬಾರ್ ನಾಯಕತ್ವದಲ್ಲಿ ಪ್ರಾರಂಭವಾಯಿತು. ಕೆರೆ ಹೂಳೆತ್ತುವ ಕೆಲಸ ಮಾಡುವಾಗ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಅದೆಷ್ಟೋ ಕೆರೆಗಳು ಅತಿಕ್ರಮಣಕ್ಕೊಳಗಾಗಿದ್ದವು. ಅಂತಹ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಹಣವಂತರು ಬಹಳ ಮಂದಿ ಇದ್ದಾರೆ. ಆದರೆ, ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸುವ ಮನಸ್ಸು ಇರುವವರು ಬಹಳ ವಿರಳ. ಕೆರೆಗಳು ನಮ್ಮ ಅಕ್ಷಯ ಪಾತ್ರೆಗಳು, ಕೆರೆಗಳಲ್ಲಿ ನೀರಿದ್ದರೆ ಭೂಮಿ ತಂಪಾಗಿರುತ್ತದೆ. ಜಲಮೂಲಗಳು ಅಭಿವೃದ್ಧಿಯಾಗಿದ್ದರೆ ಪರಿಸರ ಸಮೃದ್ಧವಾಗಿರುತ್ತದೆ ಎಂದರು.
ಈ ವೇಳೆ ಕರಸುಳ್ಳಿ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಶ್ರೀನಿವಾಸ ಹೆಬ್ಬಾರ್ ದಂಪತಿಯನ್ನು ಸನ್ಮಾನಿಸಲಾಯಿತು. ವಿಸ್ತಾರ ಮೀಡಿಯಾ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾದ ಎಚ್. ವಿ. ಧರ್ಮೇಶ್, ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್., ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಕೇಶವ ಹೆಗಡೆ, ಡಿ.ಆರ್. ಭಟ್ ಸೇರಿ ಹಲವರು ಉಪಸ್ಥಿತರಿದ್ದರು.