ಸಿದ್ದಾಪುರ: ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ಪಾಲ್ಗೊಳ್ಳುವಿಕೆಯಿಂದ ಉತ್ತಮ ಆರೋಗ್ಯ ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಉಪಾಧ್ಯಕ್ಷ ಹಾಗೂ ವಕೀಲ ಪಿ.ಬಿ.ಹೊಸೂರು ಅಭಿಪ್ರಾಯಪಟ್ಟರು.
ಅವರು ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಪುಟ್ಟಪ್ಪ ಈಜುಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ಈಜು ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧನೆಯನ್ನು ಮಾಡುವಲ್ಲಿ ಸೂಕ್ತ ತರಬೇತಿ ನೀಡಿದಾಗ ಕ್ರೀಡಾಪಟುಗಳು ಉನ್ನತ ಹಂತಕ್ಕೆ ತಲುಪಿ ತಮ್ಮ ವ್ಯಕ್ತಿತ್ವವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಸಾಫ್ಟ್ವೇರ್ ಇಂಜಿನಿಯರ್ ಸೃಜನಾ ಭಟ್ ಮಾತನಾಡಿ, ಯುವ ಪ್ರತಿಭೆ ಬೆಳಗಲು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಸಿದ್ದಾಪುರ ಈಜುಗಾರರ ವ್ಯವಸ್ಥಾಪಕ ಮಂಡಳಿಯವರು ಬಹಳ ಶ್ರಮವಹಿಸಿ ಪುಟ್ಟಪ್ಪನಕೆರೆಯ ಪರಿಸರವನ್ನು ಸ್ವಚ್ಛಗೊಳಿಸಿ ಈ ಶಿಬಿರಕ್ಕೆ ಅನುಕೂಲಕರವಾಗಿ ಮಾರ್ಪಾಡು ಮಾಡಿದ್ದಕ್ಕೆ ಎಲ್ಲರಿಗೂ ಅಭಿನಂದಿಸಿ, ಈ ಶಿಬಿರದಿಂದ ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಟ್ಟಪ್ಪ ಈಜುಗಾರರ ಸಂಘದ ವ್ಯವಸ್ಥಾಪಕ ಅರುಣ್ ಗೌಡರ್ ಮಾತನಾಡಿ, ಪುಟ್ಟಪ್ಪನ ಕೆರೆ ಎಂದಾಕ್ಷಣ ಯಾರೂ ಭಯಭೀತಿ ಪಡುವ ಅವಶ್ಯಕತೆ ಇಲ್ಲ. ಎಲ್ಲರ ಸಹಕಾರದಿಂದ ಕೆರೆಯ ನೀರಿನ ಶುದ್ಧೀಕರಣ, ಸುತ್ತಲೂ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಪರಿಸರವನ್ನು ಈ ಶಿಬಿರದ ನಿಮಿತ್ತ ಸ್ವಚ್ಛವಾಗಿಡಲು ಅಕಾಡೆಮಿಯು ಉತ್ತಮ ವೇದಿಕೆ ಸೃಷ್ಟಿಸಿದ್ದು, ಎಲ್ಲಾ ಕ್ರೀಡಾಪಟುಗಳಿಗೆ ಅನುಕೂಲವಾಗಿದೆ ಎಂದರು.
ರಾಷ್ಟ್ರಮಟ್ಟದ ಈಜು ಪಟು ತರಬೇತುದಾರ ಶ್ಯಾಮ್‌ಸುಂದರ್ ಪ್ರಸ್ತಾವಿಕ ಮಾತನಾಡಿ, ಈ ಶಿಬಿರದಲ್ಲಿ 85ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಜು ತರಬೇತಿ ಪಡೆದಿದ್ದಾರೆ. ವ್ಯಾಯಾಮ ಯೋಗಾಸನಗಳ ಮೂಲಕ ಈಜು ಕಲಿಯಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಈಜಲು ಬೇಕಾದ ಸರಳ ಕೌಶಲ್ಯವನ್ನು ನೀಡುವುದರ ಜೊತೆಗೆ, ಯಾವುದೇ ಸಂದರ್ಭದಲ್ಲಿ ಸಮಸ್ಯೆ ಎದುರಾದರೆ ಅದನ್ನು ಹೇಗೆ ನಿಭಾಯಿಸುವುದರ ಕುರಿತು ವಿವರಿಸಿದರು.
ಸಿಆರ್‌ಪಿ ಗಣೇಶ್ ಕೊಡಿಯಾ ಹಾಗೂ ಶಿಕ್ಷಕ ಚಿಕ್ಕ ನಾಯಕ್ ಉಪಸ್ಥಿತರಿದ್ದರು. ಶಿಬಿರದ ಕುರಿತು ವಿದ್ಯಾರ್ಥಿಗಳು ಹಾಗೂ ಪಾಲಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಈಜಿನ ಉಪಕರಣವನ್ನು ವಿತರಿಸಲಾಯಿತು. ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ ಪ್ರಥಮ್ ವಿ.ಭಟ್, ವಿದ್ಯಾಧರ್ ಪಂಡಿತ್ ಹಾಗೂ ವಿವೇಕ್‌ಕುಮಾರ್‌ರವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ತರಬೇತುದಾರ ಶಾಮ್‌ಸುಂದರ್ ಪ್ರಾರ್ಥನ ಗೀತೆ ಹಾಡಿದರು. ಅಕಾಡೆಮಿಯ ನಿರ್ದೇಶಕ ಪ್ರಶಾಂತ ಡಿ.ಶೇಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಚಿಕ್ಕಾ ನಾಯಕ್ ಆಭಾರ ಮನ್ನಿಸಿದರು.