ಕುಮಟಾ: ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷ ನನಗೆ ಅವಕಾಶ ನೀಡಿದ ದಿನದಿಂದ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಹಾಗೂ ನನ್ನೆಲ್ಲಾ ಹಿತೈಷಿಗಳು ನನ್ನೊಂದಿಗೆ ಹಗಲಿರುಳು ಕೆಲಸ ಮಾಡಿದ್ದೀರಿ, ಅದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ನಾನು ನಂಬಿದ್ದ ಅಭಿವೃದ್ಧಿಯ ಸಿದ್ಧಾಂತ ಎಲ್ಲವನ್ನೂ ಮೀರಿನಿಂತು ನನಗೆ ಗೆಲುವು ತರಲಿದೆ ಎಂಬ ಭರವಸೆಯಿತ್ತು, ಆದರೆ ಅದು ಆಗಲಿಲ್ಲ. ಕ್ಷೇತ್ರದ ಜನತೆ ತೋರಿರುವ ಪ್ರೀತಿ, ಅಕ್ಕರೆ ನನ್ನಲ್ಲಿ ಇನ್ನಷ್ಟು ಜನಪರವಾದ ಬದ್ಧತೆ ತುಂಬಿದೆ. ನನಗೆ ಮತ ನೀಡಿದ ಎಲ್ಲರಿಗೂ ನಾನು ಕೃತಜ್ಞ. ನಮ್ಮ ಈ ಪಯಣ ಇಲ್ಲಿಗೆ ಕೊನೆಯಾಗುವುದಿಲ್ಲ, ಮುಂದೆಯೂ ನಿಮ್ಮ ಕಷ್ಟ ಸುಖಗಳಲ್ಲಿ ನಿಲ್ಲುತ್ತೇನೆ. ಚುನಾವಣಾ ಸೋಲು ಗೆಲುವು ರಾಜಕೀಯದ ಅವಿಭಾಜ್ಯ ಅಂಗ. ನಾನು ಸೋಲಿನಿಂದ ಹತಾಶೆಗೊಂಡಿಲ್ಲ. ಇನ್ನು ಮುಂದಿನ ದಿನದಲ್ಲಿ ಆತ್ಮವಿಶ್ವಾಸ ಮತ್ತು ಹೊಸ ಸ್ಫೂರ್ತಿಯೊಂದಿಗೆ ನಿಮ್ಮ ಬಳಿ ಬರುತ್ತೇನೆ. ನನ್ನ ನಾಯಕರು ಮತ್ತು ಹಿರಿಯರ ಸಲಹೆಯನ್ನು ತೆಗೆದುಕೊಂಡು ನನ್ನ ಮುಂದಿನ ಕಾರ್ಯದ ಬಗ್ಗೆ ಗಮನ ನೀಡುತ್ತೇನೆ ಎಂದಿದ್ದಾರೆ.
ನನ್ನ ಮತ್ತು ಪಕ್ಷದ ಗೆಲುವಿಗಾಗಿ ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಪ್ರಚಾರ ಮಾಡಿದ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪ್ರೀತಿಪೂರ್ವಕ ಧನ್ಯವಾದಗಳು. ಕುಮಟಾದಲ್ಲಿ ನಾವು ಸೋತಿರಬಹುದು ಆದರೆ ರಾಜ್ಯದಲ್ಲಿ ನಡೆದ ಮಹಾಯುದ್ಧದಲ್ಲಿ ನಾವು ಗೆದ್ದಿದ್ದೇವೆ. ಶೀಘ್ರದಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. ಆ ಗೆಲುವನ್ನು ನಾವು ಬಹಳ ಹೆಮ್ಮೆಯಿಂದ ಸಂಭ್ರಮಿಸೋಣ. ಕುಮಟಾ-ಹೊನ್ನಾವರದಲ್ಲಿ ಅಭಿವೃದ್ಧಿ ಯೋಜನೆಗಳು ತ್ವರಿತಗತಿಯಲ್ಲಿ ಜಾರಿಗೊಳ್ಳಲು ಮತ್ತು ಇಡೀ ಜಿಲ್ಲೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗೆ ನಾವೆಲ್ಲ ಕೆಲಸ ಮಾಡೋಣ ಎಂದು ಅವರು ತಿಳಿಸಿದ್ದಾರೆ.