ಅಂಕೋಲಾ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಕೀಲರ ಬಳಗದ ಆಶ್ರಯದಲ್ಲಿ ತಾಲೂಕಾಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು ಆಚರಿಸಲಾಯಿತು.
ಆರೋಗ್ಯಾಧಿಕಾರಿ ಡಾ.ಸಂತೋಷಕುಮಾರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರಿಜಾ ಗೌಡ ಇವರನ್ನು ಈ ವರ್ಷದ ಉತ್ತಮ ಸೇವೆಗಾಗಿ ಅತ್ಯುತ್ತಮ ದಾದಿ ಎಂದು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ವಕೀಲ ಉಮೇಶ ನಾಯ್ಕ ಮಾತನಾಡಿ, ವಿಶ್ವದಲ್ಲಿ ದಾದಿಯರ ಸೇವೆ ಅತ್ಯಮೂಲ್ಯವಾಗಿದೆ. ವೈದ್ಯರು ಯಾವುದೇ ಚಿಕಿತ್ಸೆಯನ್ನು ನೀಡಿದರೂ ಅದು ಪರಿಣಾಮಕಾರಿಯಾಗುವಂತೆ ಶುಶ್ರೂಶೆಯನ್ನು ದಾದಿಯರೇ ಮಾಡುತ್ತಾರೆ. ರೋಗಿಗಳನ್ನು ಆತ್ಮೀಯತೆಯಿಂದ ಕಾಣುವ ಇವರು ಮಾನಸಿಕವಾಗಿ ಉಲ್ಲಸಿತರಾಗಿರುವಂತೆ ನೋಡಿಕೊಳ್ಳುತ್ತಾರೆ. ಆಸ್ಪತ್ರೆಗೆ ಬರುವ ರೋಗಗಳೊಂದಿಗೂ ಅವರ ಕುಟುಂಬಸ್ಥರಿಗೂ ಸಹೋದರಿಯರಾಗಿ ಬೇಗ ಗುಣಮುಖರಾಗುವಂತೆ ಮಾಡುತ್ತಾರೆ. ಇವರ ಸೇವೆಯನ್ನು ಇತರೆ ಯಾವ ಸೇವೆಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಆಸ್ಪತ್ರೆಯ ಪ್ರಮುಖ ವೈದ್ಯ ಡಾ.ಈಶ್ವರಪ್ಪ ಮಾತನಾಡಿ, ವೈದ್ಯರು ನೀಡುವ ಚಿಕಿತ್ಸೆಗೆ ಮತ್ತು ಸೂಚಿಸುವ ಆರೈಕೆಗೆ ದಾದಿಯರ ಪಾತ್ರ ಬಹಳ ಮುಖ್ಯ ಎಂದು ವಿಶ್ವ ದಾದಿಯರ ದಿನಾಚರಣೆಗೆ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಗಿರಿಜಾ ಗೌಡ ಮಾತನಾಡಿ ತಮ್ಮ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಪತ್ರಕರ್ತರಿಗೆ ಧನ್ಯವಾದಗಳು, ಈ ಸನ್ಮಾನ ಇನ್ನಿತರ ದಾದಿಯರಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರಣೆಯಾಗಿರಲಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಪ್ರಾಸ್ತಾವಿಕ ಮಾತನಾಡಿ ಆಸ್ಪತ್ರೆಯಲ್ಲಿ ರೋಗಿಗಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗಿರುತ್ತದೆ. ದಾದಿಯರು ರೋಗಿಗಳೊಂದಿಗೆ ಆತ್ಮೀಯತೆಯಿಂದ ತನ್ನದೆ ಕುಟುಂಬದ ಸದಸ್ಯರೆಂಬಂತೆ ಆರೈಕೆ ಮಾಡುತ್ತಾರೆ. ಅವರ ಸೇವೆಗೆ ಸೂಕ್ತ ಗೌರವ ಸಿಗಬೇಕು ಎಂದರು ಹಾಗೂ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರೋಗ್ಯಾಧಿಕಾರಿ ಡಾ.ಸಂತೋಷಕುಮಾರ ಮಾತನಾಡಿ, ಒಂದು ಆಸ್ಪತ್ರೆಯಲ್ಲಿ ವೈದ್ಯರ ಕರ್ತವ್ಯದಷ್ಟೇ ದಾದಿಯರ ಕರ್ತವ್ಯವೂ ಪ್ರಮುಖವಾಗಿರುತ್ತದೆ. ಕೊರೋನ ಸಂದರ್ಭದಲ್ಲಿ ತಾಲೂಕಾಸ್ಪತ್ರೆಯ ದಾದಿಯರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಎಲ್ಲ ದಾದಿಯರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಪತ್ರಕರ್ತ ಕೆ ರಮೇಶ, ನಾಗರಾಜ ಜಾಂಬಳೇಕರ ಉಪಸ್ಥಿತರಿದ್ದು ಮಾತನಾಡಿದರು. ದಾದಿಯರ ಪರವಾಗಿ ನಿರ್ಮಲಾ ಸಾವಂತ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಅಕ್ಷಯ ನಾಯ್ಕ, ದಿನಕರ ನಾಯ್ಕ, ಮಂಜುನಾಥ ನಾಯ್ಕ, ಆಸ್ಪತ್ರೆಯ ದಾದಿಯರು, ಸಿಬ್ಬಂದಿಗಳು ಇದ್ದರು.