ಅಂಕೋಲಾ: ವಿಧಾನಸಭೆಯ ಚುನಾವಣೆಯಲ್ಲಿ ಪ್ರಜ್ಞಾವಂತ ನಾಗರಿಕರೆಲ್ಲರೂ ಮತದಾನ ಮಾಡಿದ್ದಾರೆ. ಆದರೆ ಇಲ್ಲಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯೊಬ್ಬಳು ಮತದಾನ ಮಾಡಿಲ್ಲ. ಈ ವಿಚಾರ ತಿಳಿದ ಪತಿ, ಆಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಡಿವೋರ್ಸ್ ನೀಡುವ ತನಕ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಸರ್ಕಾರಿ ಉದ್ಯೋಗಿಯಾಗಿಯೇ ಮತದಾನ ಮಾಡದ್ದಕ್ಕೆ ಕೋಪಗೊಂಡ ಪತಿ, ಪತ್ನಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾನೆ. ಇದರಿಂದ ಕುಪಿತಳಾದ ಪತ್ನಿ, ಮತದಾನ ಮಾಡುವುದು ಬಿಡುವುದು ನನ್ನ ಇಷ್ಟ. ನೀನು ಬುದ್ಧಿವಾದ ಹೇಳುವ ಅವಶ್ಯಕತೆಯಿಲ್ಲ ಎಂದು ಗದರಿದ್ದಾಳೆ ಎನ್ನಲಾಗಿದೆ. ಇದರಿಂದಾಗಿ ಮತ್ತಷ್ಟು ಕೋಪಗೊಂಡ ಪತಿ, ಮತದಾನದ ಅವಶ್ಯಕತೆಯ ಕುರಿತು ಸ್ವಲ್ಪ ತಿಳಿಸಿ ಹೇಳಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಪತ್ನಿ ವಿಚ್ಛೇದನ ನೀಡುವುದಾಗಿ ಬೆದರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ದುಃಖಿತನಾದ ಪತಿ, ತನ್ನ ಸ್ನೇಹಿತನೊಂದಿಗೆ ವಿಷಯ ಹಂಚಕೊಂಡಾಗ ವೃತ್ತಾಂತ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಕಾರವಾರ- ಅಂಕೋಲಾ ವಿಧಾನಸಭೆಯ ಮತದಾನದ ಕುರಿತು ತುರ್ತು ಸಮೀಕ್ಷೆ ನಡೆಸಿದಾಗ ಗೈರು ಮತದಾನವಾಗಿರುವವರಲ್ಲಿ ಹೆಚ್ಚಿನ ಪಾಲು ಮಹಿಳಾ ಸರಕಾರಿ ನೌಕರರಾಗಿದ್ದಾರೆ. ಅದರಲ್ಲಿಯೂ ತಹಶೀಲ್ದಾರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳೇ ಬಹುತೇಕರು ಮತದಾನ ಮಾಡಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಕರ್ನಾಟಕ ಸರ್ಕಾರ ಸರ್ಕಾರಿ ಸಿಬ್ಬಂದಿಗಳನ್ನು ಬಳಸಿಕೊಂಡು ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಜಾಗೃತಿ ಮೂಡಿಸುವ ಸಿಬ್ಬಂದಿಗಳೇ ಮತದಾನ ಮಾಡಿಲ್ಲ. ಯಾರ ಕೈಗೆ ಸರ್ಕಾರ ನಡೆಸುವ ಅಧಿಕಾರ ಕೊಡಬೇಕು ಎಂಬ ಕನಿಷ್ಠ ಜ್ಞಾನ ಇಲ್ಲದ ಜನರ ಕೈಗೆ ಸರ್ಕಾರಿ ನೌಕರಿ ಸಿಕ್ಕಿರುವುದು ನಿಜಕ್ಕೂ ರಾಷ್ಟ್ರೀಯತೆಗೆ ಅಪಾಯದ ಮುನ್ಸೂಚನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿರುವುದು ಅವಶ್ಯಕವಾಗಿದೆ.