ಅಂಕೋಲಾ: ಭಾರೀ ಜನಸ್ತೋಮದ ನಡುವೆ ರೂಪಾಲಿಗೆ ಜೈಕಾರ, ಪುಷ್ಪಮಳೆ ಸುರಿಸುತ್ತ ಆತ್ಮೀಯವಾಗಿ ಊರಿಗೆ ಸ್ವಾಗತಿಸಿಕೊಂಡು ತೋರಿದ ಬೆಳ್ಳಂಬಾರದ ಜನತೆಯ ಪ್ರೀತಿ- ವಿಶ್ವಾಸ ನನ್ನ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಕಾರ್ಯ ಸಾರ್ಥಕವೆನಿಸಿತು ಎಂದು ಶಾಸಕಿ, ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು.
ಅವರು ಬೆಳಂಬಾರದಲ್ಲಿ ಜರುಗಿದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮೀನುಗಾರರು ಇನ್ನೂ ಕೂಡ ಇದ್ದ ಸ್ಥಿತಿಯಲ್ಲೇ ಇರಲು ಕಾರಣ ಅಂದಿನ ಕಾಂಗ್ರೆಸ್ ಸರಕಾರ, ಕಾಂಗ್ರೆಸ್ಸಿಗೆ ಮೀನುಗಾರರ ಸಮಸ್ಯೆ ಬಗೆಹರಿಸಲು ಮನಸ್ಸಿರಲಿಲ್ಲ ಏಕೆಂದರೆ ಹಿಂದೂ ಧರ್ಮದ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ಬಹುಸಂಖ್ಯಾತರಾಗಿರುವ ಮೀನುಗಾರರಾರು ಎಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ನಮಗೆ ಮುಳುವಾಗುತ್ತಾರೋ ಎಂಬ ಭಯದಿಂದ ಮೀನುಗಾರರಿಗೆ ಯಾವುದೇ ಯೋಜನೆಗಳನ್ನು ತರದೆ ಅವರು ಇದ್ದಲಿಯೇ ಇರುವಂತೆ ಮಾಡಿದ್ದಾರೆ. ಇಂದು ಡಬಲ್ ಇಂಜಿನ್ ಬಿಜೆಪಿ ಸರಕಾರ ಮೀನುಗಾರರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿದೆ ಎಂದರು.
ಬೆಳಂಬಾರದಲ್ಲಿ 140 ಕೋಟಿ ರೂ. ಹಾಗೂ ಮಾಜಾಳಿಯಲ್ಲಿ 300 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಬಂದರುಗಳು ನಿರ್ಮಾಣವಾಗಲಿದೆ. ಬೆಳಂಬಾರದಲ್ಲಿ ಪ್ರತೀ ಮನೆಗೆ ಕುಡಿಯುವ ನೀರು ಕೊಡುವ ಯೋಜನೆ ಪ್ರಗತಿಯಲ್ಲಿದ್ದು ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಶಾಸಕಿಯಾಗಿ ನಾನು ನುಡಿದಂತೆ ನಡೆದಿದ್ದೇನೆ. ಬೆಳಂಬಾರದ ಮೀನುಗಾರರ ಮತ್ತು ಹಾಲಕ್ಕಿ ಸಮುದಾಯದ ಅಭಿವೃದ್ಧಿಗಾಗಿ ಎಂದಿಗೂ ಶ್ರಮಿಸುತ್ತೇನೆ. ಇಲ್ಲಿನ ಮಾರುತಿ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಲ್ಲದೆ ಭಜರಂಗಿಯ ಅಪಾರ ಭಕ್ತರಾಗಿರುವ ಮೀನುಗಾರರು ಮತ ನೀಡುವಾಗ ಮೋದೀಜಿ ಕರೆ ನೀಡಿದಂತೆ ಜೈ ಭಜರಂಗ ಬಲಿ ಎಂದು ಬಟನ್ ಒತ್ತಿ ಮತ ಚಲಾಯಿಸಿ ಎಂದರು.
ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ವಿಧಾನಸೌದಾದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಬೇಡಿಕೆಯ ಗಟ್ಟಿ ಧ್ವನಿಯಾದವಳೇ ಶಾಸಕಿ ರೂಪಾಲಿ ನಾಯ್ಕ, ಶಾಸಕಿಯಾದ್ದಾಗಿನಿಂದ ಎಲ್ಲ ಇಲಾಖೆಗಳ ಅತೀ ಹೆಚ್ಚು ಅನುದಾನಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದದ್ದನ್ನು ಪರಿಗಣಿಸಿ ಎರಡನೇ ಬಾರಿಗೆ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ನಾವೆಲ್ಲರೂ ಶಾಸಕಿ ರೂಪಾಲಿ ನಾಯ್ಕ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕಾಗಿದೆ. ಅದಲ್ಲದೆ ಮಾಜಿ ಸಚಿವ ಆನಂದ ಅಸ್ನೋಟಿಕರ ವಿರುದ್ದ ಹರಿಹಾಯ್ದು ಈ ಹಿಂದೆ ಆನಂದ ಅಸ್ನೋಟಿಕರ ಎರಡು ಬಾರಿ ಶಾಸಕರಾಗಿ ಮಂತ್ರಿಯಾಗಿ ತನ್ನದೇ ಘನತೆ ಹೊಂದಿದವರು ಈಗ ನೋಡಿದರೆ ರೂಪಾಲಿ ನಾಯ್ಕರ ಜನಪ್ರಿಯತೆಗೆ ಹೆದರಿ ಕಾಂಗ್ರೆಸ್ ಅಭ್ಯರ್ಥಿಯ ಗುಲಾಮನಾಗಿದ್ದು ಇದು ಕ್ಷೇತ್ರದ ಮತದಾರರಲ್ಲಿ ಅಸಹ್ಯ ಹುಟ್ಟಿಸಿದೆ ಎಂದರು.
ಜಿಲ್ಲಾ ಪ್ರಮುಖರಾದ ಭಾಸ್ಕರ ನಾರ್ವೇಕರ, ಗೋವಾ ಶಾಸಕ ಪ್ರೇಮೇಂದ್ರ ಶೇಟ ಮಾತನಾಡಿದರು. ವೇದಿಕೆಯಲ್ಲಿ ಕಾರವಾರ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಹಿಲ್ಲೂರು ಗ್ರಾ.ಪಂ. ಅಧ್ಯಕ್ಷ ಬಾಬು ಸುಂಕೇರಿ, ರೂಪಾಲಿ ಪುತ್ರ ಪರ್ಬತ್, ಸೊಸೆ ರೇಖಾ ಉಪಸ್ಥಿತರಿದ್ದರು.