ಯಲ್ಲಾಪುರ : ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ಜನಪ್ರತಿನಿಧಿಯಾದವನು ಜನರ ತಳಹಂತದ ಸಮಸ್ಯೆಗಳನ್ನು ಬಗೆಹರಿಸಿದಾಗ ಮಾತ್ರ ಅದು ಅಭಿವೃದ್ಧಿಯಾಗಿ ಸಾಬೀತಾಗುತ್ತದೆ ಎಂದು ಜೆಡಿಎಸ್ ಪಕ್ಷದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ನಾಗೇಶ ನಾಯ್ಕ ಹೇಳಿದರು.
ಅವರು ಮಂಗಳವಾರ ಸಂಜೆ ಪಟ್ಟಣ ವ್ಯಾಪ್ತಿಯ ತಳ್ಳಿಕೇರಿಯಲ್ಲಿ ಅನ್ಯ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಲವಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜನಪ್ರತಿನಿಧಿಯಾದವನು ಸಾರ್ವಜನಿಕರ ಮನೆಗೆ ಸಂಬಂಧಿಸಿದ ಸಮಸ್ಯೆಗಳು, ಸಮರ್ಪಕ ವಿದ್ಯುತ್ ಹಾಗೂ ನೀರು ಪೂರೈಕೆ, ಮಕ್ಕಳು ಓದಲು ಸಮೀಪದಲ್ಲಿಯೇ ಶಾಲೆ, ಸಾರ್ವಜನಿಕರ ಆರೋಗ್ಯ, ಇನ್ನು ಮುಂತಾದ ಮೂಲಭೂತ ಸೌಕರ್ಯಗಳು ಸಾರ್ವಜನಿಕರಿಗೆ ಒದಗಿಸಿ ಕೊಡಬೇಕು. ಹಿಂದೆ ನಡೆದ ಚುನಾವಣೆಗಳಿಗೆ ಮೌಲ್ಯ ಇತ್ತು. ಸಾಮಾಜಿಕವಾಗಿ ಹಾಗೂ ಜನರಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಮತದಾರರು ಆಯ್ಕೆ ಮಾಡುತ್ತಿದ್ದರು. ಇಂದು ಸ್ಪರ್ಧಿಸಿರುವ ಅಭ್ಯರ್ಥಿಗಳು ಒಡ್ಡುವ ಹಣದ ಆಮಿಷದ ಕಾರಣಕ್ಕಾಗಿಯೇ ಚುನಾವಣೆಗಳು ಮೌಲ್ಯ ಕಳೆದುಕೊಂಡಿದೆ ಎಂದರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿಕ್ರಮಣದಂತಹ ಗಂಭೀರ ಸಮಸ್ಯೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಬೇರೆ ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಅತಿಕ್ರಮಣದಾರರ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದರು. ಜೆಡಿಎಸ್ ಪಕ್ಷ ಆಗ ರೈತರು ಬಡ ಜನರ ಬಗ್ಗೆ ಹೆಚ್ಚು ಕಾಳಜಿ ವಹಿಸಿತ್ತು. ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಸ್ವ ಸಹಾಯ ಸಂಘದ ಸಾಲ ಮನ್ನಾ ಹಾಗೂ ಬಡ್ಡಿ ರಹಿತ ಸಾಲ ಕೊಡುವ ಯೋಜನೆ ಬರಲಿದೆ. ಗ್ಯಾಸ್ ಸಿಲೆಂಡರ್ ಬೆಲೆ ಇಳಿಕೆಯಾಗಲಿದೆ, ವಯಸ್ಸಾದವರಿಗೆ ಮಾಸಿಕ ಅದಾಯ ಮುಂತಾದ ಯೋಜನೆ ಹಾಕಿಕೊಳ್ಳಲಾಗಿದೆ ಎಂದ ಅವರು, ಮತ್ತೊಮ್ಮೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಹಾಗೂ ತಾಲೂಕಿನ ಪ್ರಮುಖರಾದ ಬೆನಿತ್ ಸಿದ್ದಿ, ಜಾನ್ ಬಿಳಕಿಕರ, ರಾಜು ಎಂ ನಾಯ್ಕ, ಡೇನಿಮ್ ಸಿದ್ದಿ ಇದ್ದರು.
ತಳ್ಳಿಕೇರಿಯ ಹಸ್ಮತ್ ಮುಲ್ಲಾ, ಶಾರೂಖ್ ಶೇಖ್, ಖುರ್ಷೀದಾ ಬಾನು, ಸಪೂರಾ ಶೇಖ್ ಮುಂತಾದವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.