ಅಂಕೋಲಾ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಕಾರ್ಯಕ್ರಮದಿಂದಾಗಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಈ ಬಾರಿ ದಾಖಲೆ ಬರೆಯಲಿದೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಹಟ್ಟಿಕೇರಿ ಗೌರಿಕೆರೆ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಮಟ್ಟದ ನಾಯಕರುಗಳಾದ ಜಿ.ಪಿ.ನಡ್ಡಾ, ಅಮಿತ್ ಶಾ,ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವಾರು ನಾಯಕರು, ರಾಜ್ಯಮಟ್ಟದ ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಬೂತ್ ಮಟ್ಟದ ಸಂಘಟನಾ ಶಕ್ತಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದ ಅವರು ಅಂಕೋಲಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನ ಒಂದು ಐತಿಹಾಸಿಕ ಕ್ಷಣವಾಗಲಿದೆ. ಜಿಲ್ಲೆಯ ಜನರೆಲ್ಲ ಸೇರಿ ನಮ್ಮ ಹೆಮ್ಮೆಯ ಪ್ರಧಾನಿಗೆ ಸ್ವಾಗತ ಕೋರೋಣ ಎಂದು ಕರೆ ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಾದ್ಯಮ ವಕ್ತಾರ ನಾಗರಾಜ ನಾಯಕ, ಕುಮಟಾ ಶಾಸಕ ದಿನಕರ ಶೆಟ್ಟಿ ಪ್ರಮುಖರುಗಳಾದ ಎನ್. ಎಸ್. ಹೆಗಡೆ, ಪ್ರಸನ್ನ ಕೆರೆಕೈ ಮೊದಲಾದವರು ಉಪಸ್ಥಿತರಿದ್ದರು.