ಗೋಕರ್ಣ: ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ಕಾಮಗಾರಿಯು ವೇಗವಾಗಿ ಆರಂಭಗೊ0ಡಿದ್ದು, ಜೂನ್ ಅಂತ್ಯದ ಒಳಗಾಗಿ ಸೇತುವೆ ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮುಂದಾಗಿದೆ.
ಕಳೆದ 5 ವರ್ಷಗಳ ಹಿಂದೆ 30 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿಗೆ ಭೂಮಿಪೂಜೆ ನಡೆಸಲಾಗಿತ್ತು. ಆದರೆ 5 ವರ್ಷ ಕಳೆಯುತ್ತ ಬಂದರೂ ಕಾಮಗಾರಿ ಮುಕ್ತಾಯಗೊಳ್ಳದ ಪರಿಣಾಮ ಸ್ಥಳೀಯರು ಅನೇಕ ಬಾರಿ ಪ್ರತಿಭಟನೆ ಕೂಡ ನಡೆಸಿದ್ದರು. ಈ ಹಳೆಯ ನೀಲನಕ್ಷೆಯಂತೆ ಕಾಮಗಾರಿ ನಡೆದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿಗಳನ್ನು ತೆರವುಗೊಳಿಸಬೇಕಾಗಿತ್ತು. ಹೀಗಾಗಿ ಸ್ಥಳಿಯ ಪ್ರಮುಖರ ಬೇಡಿಕೆಯ ಮೇರೆಗೆ ಶಾಲೆಯನ್ನು ತಪ್ಪಿಸಿ ಇನ್ನೊಂದು ಹೊಸದಾಗಿ ಕೂಡ ರಸ್ತೆಯ ನಿರ್ಮಾಣದ ನೀಲನಕ್ಷೆ ಸಿದ್ಧಪಡಿಸಲಾಗಿತ್ತು.
ಆದರೂ ಕೂಡ ಕಾಮಗಾರಿ ವೇಗ ಪಡೆಯದಿದ್ದರಿಂದ ಮತ್ತೆ ಪ್ರತಿಭಟನೆ ಎಚ್ಚರಿಕೆ ನೀಡಿ ತಹಸೀಲ್ದಾರರಿಗೆ ಹಾಗೂ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರು. ಈಗ ಜೂನ್ ಅಂತ್ಯದ ಒಳಗಾದರೂ ಕಾಮಗಾರಿ ಮುಕ್ತಾಯಗೊಳಸಲೇಬೇಕು ಎಂದು ತೀರ್ಮಾನಕ್ಕೆ ಬಂದಿರುವ ಇಲಾಖೆ ಮತ್ತು ಕಂಪನಿಯವರು ಕಾಮಗಾರಿ ಆರಂಭಿಸಿದ್ದಾರೆ. ಸತತವಾಗಿ ಪ್ರತಿಭಟನೆಗಳು ನಡೆಯುತ್ತ ಬಂದ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೂ ಒತ್ತಡ ಆರಂಭಗೊ0ಡಿತ್ತು.
ಸೇತುವೆ ರಸ್ತೆ ನಿರ್ಮಾಣಗೊಳ್ಳುವಾಗ ಮಂಜಗುಣಿಗೆ ಒಳರಸ್ತೆ ನಿರ್ಮಿಸಲು ನೀಲನಕ್ಷೆ ಮುಂಚಿತವಾಗಿಯೇ ಸಿದ್ಧಪಡಿಸಲಾಗಿತ್ತು. ಅದರಂತೆಯೇ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಕೊನೆಕ್ಷಣದಲ್ಲಿ ಕೆಲವರು ಬಂದು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೆಲಸ ನಿಲ್ಲಿಸುವ ಹುನ್ನಾರು ನಡೆಸಿದ್ದರೂ ಕೂಡ ಅದ್ಯಾವುದನ್ನು ಕ್ಯಾರೆ ಅನ್ನದ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ಕಂಪನಿಯವರು ಕಾಮಗಾರಿಯನ್ನು ಮುಂದುವರೆಸಿದ್ದಾರೆ.
ಜೂನ್ ಅಂತ್ಯದ ಒಳಗಾಗಿ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಜನರ ಸಂಚಾರಕ್ಕೆ ಹೆಬ್ಬಾಗಿಲು ತೆರೆದಂತಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದು, ಇದೇ ವೇಗದಲ್ಲಿ ಹೊರಟರೆ ಜೂನ್ ಅಂತ್ಯದ ಒಳಗೆ ಪೂರ್ಣಗೊಂಡು ಜುಲೈ ಆರಂಭದಲ್ಲಿಯೇ ಉದ್ಘಾಟನೆಗೆ ಸಿದ್ಧವಾಗಲಿದೆ.