ಶಿರಸಿ: ತಾಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣಕೇರಿಯ ವಿಶಾಲ ಕೆರೆಯು ಪಾಚಿಗಟ್ಟಿ, ಮುಳ್ಳುಗಂಟಿಗಳು ಬೆಳೆದು ಉಪಯೋಗಕ್ಕೆ ಬಾರದಂತಾಗಿದ್ದು, ರವಿವಾರ ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ಜಲ ಸಂರಕ್ಷಣೆಗಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಯೋಗಸ್ಥರು, ರೈತರು, ಯುವಕರು, ವಿದ್ಯಾರ್ಥಿಗಳೆಲ್ಲ ಸಂಭ್ರಮದಲ್ಲಿ ಕೆರೆಯ ಸಂರಕ್ಷಣೆಗೆ ಕೈ ಜೋಡಿಸಿದರು. ಜೆಸಿಬಿ, ಟ್ರಾಕ್ಟರ್ ಬಳಸಿ ನೂರಾರು ಯುವಕರು ಕೆರೆಯಲ್ಲಿ ಇಳಿದು ಪಾಚಿ ತೆಗೆದರು.
ಜೀವ ಜಲದ ನೇತೃತ್ವ:
ಕೆರೆಯ ಸಂರಕ್ಷಣೆಗಾಗಿ ಬೆಳೆದ ಪಾಚಿ ತೆಗೆದು ಸ್ವಚ್ಛಗೊಳಿಸಲು ಜೀವ ಜಲ ಕಾರ್ಯಪಡೆ ನೇತೃತ್ವ ವಹಿಸಿತ್ತು. ರವಿವಾರ ಬೆಳಿಗ್ಗಿನಿಂದಲೇ ಕಾರ್ಯಪಡೆಯು ಹತ್ತಾರು ಸದಸ್ಯರು, ಟ್ರಾಕ್ಟರ್, ಜೆಸಿಬಿಯೊಂದಿಗೆ ಕೆರೆಯ ಉಳಿವಿಗೆ ಕೆಲಸ ಆರಂಭಿಸಿತು.
ಕೆರೆಯ ಅಭಿವೃದ್ದಿಗೆ ಗ್ರಾಮಸ್ಥರು ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರಲ್ಲಿ ವಿನಂತಿಸಿದ್ದರು. ಗ್ರಾಮಸ್ಥರು, ಕಾರ್ಯಪಡೆ ಒಂದಾಗಿ ಗ್ರಾಮದ ನಡುವೆ ಇದ್ದ ಮೂರು ಎಕರೆ ವಿಸ್ತೀರ್ಣದ ಕೆರೆ ಅಭಿವೃದ್ಧಿಗೆ ಮುಂದಾಯಿತು. ಮೊದಲಿಗೆ ಬೆಳೆದ ಪಾಚಿ ತೆಗೆಯಲು ಆಯೋಜಿಸಿತು.
ಕಾರ್ಯಪಡೆಯ ಅಧ್ಯಕ್ಷ, ಶ್ರೀನಿವಾಸ ಹೆಬ್ಬಾರರಿಗೆ ನಮ್ಮ ಕೆರೆಗಳ ಉಳಿವು, ರಕ್ಷಣೆಯ ಕನಸು. ಕೆರೆ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಂತೇ ಸ್ವತಃ ಕೆರೆಗೆ ಇಳಿದರು.
ಮುಂಜಾನೆ 9.30ರಿಂದ ಊರ ಯುವಕರಂತೆ ಕೆರೆಗೆ ಇಳಿದು ಸ್ವಚ್ಛತಾ ಅಭಿಯಾನ ನಡೆಸಿದರು. ಮುಳ್ಳುಗಂಟಿಗಳಿಂದ ತುಂಬಿದ್ದ ಕೆರೆಯಲ್ಲಿ ಹುಡುಗರಂತೆ ಉತ್ಸಾಹದಿಂದ ಭಾಗವಹಿಸಿದ್ದು ಗಮನ ಸೆಳೆಯಿತು. ಮೇಲೆನಿಂತು ಹೀಗೆ ಮಾಡಿ ಎನ್ನದೇ ಸ್ವತಃ ಹೆಬ್ಬಾರರೂ ಯುವಕರು ನಾಚುವಷ್ಟು ಕೆರೆಗೆ ಇಳಿದದ್ದು ಅಚ್ಚರಿ ತಂದಿತು. ಹೆಬ್ಬಾರರ ಜಲಪ್ರೀತಿಗೆ ಇದು ಸಾಕ್ಷಿಯಾಯಿತು.
ಸಣ್ಣಕೇರಿ ಕೆರೆ ಎಂದರೆ ಸಣ್ಣದಲ್ಲ. ಬರೋಬ್ಬರಿ ಮೂರು ಎಕರೆಯಷ್ಟು ವಿಸ್ತಾರವಾದ ಕೆರೆ. ಕೆರೆ ಏರಿಯ ಮೇಲೆ ರಸ್ತೆ, ಕೆಳ ಭಾಗದಲ್ಲಿ ಅಡಿಕೆ ತೋಟಗಳಿವೆ.
ಸಣ್ಣಕೇರಿ, ಪುರ, ಗಣಗೇರಿ, ಹೊಳೆಬೈಲ್, ಮಾವಿನಕೊಪ್ಪ ಸೇರಿದಂತೆ ಹಲವು ಹಳ್ಳಿಗಳಿಗೆ, ನೂರಕ್ಕೂ ಅಧಿಕ ಕೃಷಿ ಭೂಮಿಗೆ ಆಶ್ರಯವಾದ ಕೆರೆಗೆ ಎರಡು ಶತಮಾನಗಳಾಚೆಯ ಇತಿಹಾಸ ಇದೆ ಎನ್ನುತ್ತಾರೆ ಗ್ರಾಮಸ್ಥರು.
ಮೂರ್ನಾಲ್ಕು ದಶಕಗಳ ಹಿಂದೆ ಒಮ್ಮೆ ಒಂದಷ್ಡು ಹೂಳು ತೆಗೆಯಲಾಗಿತ್ತಂತೆ. ಅದಾದ ನಂತರ ನಿರ್ವಹಣೆ ಇಲ್ಲದೇ ಹೀಗಾಗಿದೆ. ಹೇಗಾದರೂ ಕೆರೆ ಜೀರ್ಣೋದ್ದಾರ ಮಾಡಬೇಕು ಎಂದು ಮನವಿ ಮಾಡಿದ್ದಕ್ಕೆ ಹೆಬ್ಬಾರ ಅವರು ಬೆಂಬಲವಾಗಿ ಬಂದಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಈಗ ಇದರ ಅಭಿವೃದ್ದಿಗೆ ಜೀವ ಜಲ ಕಾರ್ಯಪಡೆ ಟೊಂಕ ಕಟ್ಟಿಕೊಂಡಿದೆ. ಕರಸುಳ್ಳಿ, ಜೈನಮಠ, ಯಚಡಿ ಕೆರೆಗಳ ಜೊತೆ ಸಣ್ಣಕೇರಿ ಕೆರೆ ಕೂಡ ಈ ವರ್ಷದ ಪಟ್ಟಿಗೆ ಸೇರಿಕೊಂಡಿದೆ.