ಶಿರಸಿ: ಅಜ್ಜರಣಿ ಸೇತುವೆ ಮಂಜೂರಿಯಾಗಿ ಟೆಂಡರ್ ಕರೆದು ಶಿಲಾನ್ಯಾಸ ಮಾಡಲಾಗಿದೆ. ಆದರೆ ದುರಾದೃಷ್ಟವಶಾತ್ ವ್ಯಕ್ತಿಯೋರ್ವರು ಸೇತುವೆ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಸೇತುವೆ ಕಾಮಗಾರಿ ನೆನೆಗುದಿಗೆ ಬೀಳಬೇಕಾಯಿತೆಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ವಿಷಾದ ವ್ಯಕ್ತಪಡಿಸಿದರು.
ಅವರು ದಲಿತರೇ ಹೆಚ್ಚಾಗಿರುವ ಬನವಾಸಿ ವ್ಯಾಪ್ತಿಯ ಅಜ್ಜರಣಿ ಗ್ರಾಮಕ್ಕೆ ತೆರಳಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದರು. ಅಜ್ಜರಣಿ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕುಡಿಯುವ ನೀರು, ಸಿಮೇಂಟ್ ರಸ್ತೆ ಇನ್ನೂ ಅನೇಕ ಕಾಮಗಾರಿಗಳನ್ನು ಮಾಡಿದ್ದೇನೆ.ಆದರೆ ಇಲ್ಲಿನ ಒಂದು ದೊಡ್ಡ ಸಮಸ್ಯೆಯಾದ ಅಜ್ಜರಣಿ ಸೇತುವೆ ನಿರ್ಮಾಣಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿ ಕೂಡಾ ಆಗಿ ಕಾಮಗಾರಿಯ ಶಿಲನ್ಯಾಸ ಕೂಡಾ ಮಾಡಿ ಹೋಗಿದ್ದೆ.ಆದರೆ ನ್ಯಾಯಾಲಯದಿಂದ ತಡೆ ಆಜ್ಞೆ ಬಂದಿದ್ದರಿಂದ ಕೆಲಸ ಮುಂದುವರೆಸಲು ಸಾದ್ಯವಾಗಿಲ್ಲ. ಆದರೆ ಕಷ್ಟಪಟ್ಟು ನ್ಯಾಯಾಲಯದಿಂದ ಪ್ರಕರಣವನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ಹಿನ್ನಲೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಅಜ್ಜರಣಿ ಸೇತುವೆ ಖಂಡಿತ ಅಗಲಿದೆ ಎಂದರು.
ಅದರಂತೆ ಇಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಸಿಂಗಲ್ ವೋಲ್ಟ್ನಲ್ಲಿ ಜನರು ಬಾಳುವ ಸ್ಥತಿಯಿತ್ತು. ಆದರೆ ಬನವಾಸಿಯಲ್ಲಿ ಗ್ರಿಡ್ ಮಾಡುವ ಮೂಲಕ ಈ ಸಮಸ್ಯ ಬಗೆಹರಿಸಿದ್ದೇನೆ. ಅಜ್ಜರಣಿ ನಾನು ಪ್ರೀತಿಸುವ ಗ್ರಾಮವಾಗಿದ್ದು, ಇಲ್ಲಿ ಪ್ರತಿ ಬಾರಿಯೂ ಜನರು ನನ್ನ ಕೈ ಹಿಡಿದು ಗೆಲ್ಲಿಸಿದ್ದಾರೆ. ಈ ಬಾರಿಯೂ ನನಗೆ ಗೆಲ್ಲಿಸುವ ವಿಶ್ವಾಸವಿದೆ ಎಂದರು.