ಗೋಕರ್ಣ: ಕಳೆದ 5 ವರ್ಷಗಳಿಂದ ಆಮೆ ಗತಿಯಲ್ಲಿ ನಡೆಯುತ್ತಿರುವ ಗಂಗಾವಳಿ-ಮ0ಜಗುಣಿ ಸೇತುವೆ ಕಾಮಗಾರಿ ವಿರುದ್ಧ ಸ್ಥಳೀಯರು ನಿರಂತರವಾಗಿ ಪ್ರತಿಭಟನೆ ಮಾಡುವುದರ ಜತೆಗೆ ಇತ್ತೀಚೆಗೆ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದರು. ಅದರಂತೆ ಸೋಮವಾರ ಕಾಮಗಾರಿ ಆರಂಭಗೊoಡಿದೆ.
ಕೇವಲ ಒಂದೇ ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ರಾಜಕೀಯ ವ್ಯಕ್ತಿಗಳ ಕಾರಣದಿಂದಾಗಿಯೇ ಪೂರ್ಣಗೊಳ್ಳದೇ 5 ವರ್ಷ ಕಳೆದರೂ ಹಾಗೇ ಉಳಿದುಕೊಳ್ಳುವಂತಾಗಿದೆ. ಈಗಾಗಲೇ ಸೇತುವೆ ನಿರ್ಮಿಸಿದ್ದರೂ ಕೂಡ ಗಂಗಾವಳಿ ಮತ್ತು ಮಂಜಗುಣಿಯ ರಸ್ತೆ ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಬಗ್ಗೆ ಗುತ್ತಿಗೆ ಪಡೆದ ಕಂಪನಿಯವರನ್ನು ವಿಚಾರಿಸಿದರೆ ಕಾರ್ಮಿಕರ ನೆಪವೊಡ್ಡಿ ನುಣುಚಿಕೊಳ್ಳುತ್ತಿದ್ದರು. ಇನ್ನು ಕೆಆರ್‌ಡಿಸಿಎಲ್‌ನವರಿಗೂ ಕೇಳಬೇಕೆಂದರೆ ಅವರದು ಹುಬ್ಬಳ್ಳಿ ಕಚೇರಿಯಾಗಿದೆ. ಹೀಗಾಗಿ ಏನು ಮಾಡಬೇಕು ಎನ್ನುವುದು ಜನರು ಗೊಂದಲಕ್ಕೆ ಒಳಗಾಗಿದ್ದರು.
ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮೇ 16ರ ಒಳಗಾಗಿ ಕಾಮಗಾರಿ ಆರಂಭಗೊಳ್ಳದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಅದರಂತೆ ಸೋಮವಾರ ಹಿಟಾಚಿ ಮೂಲಕ ಕಾಮಗಾರಿಗೆ ಮತ್ತೆ ಚಾಲನೆ ನೀಡಿದ್ದಾರೆ. ಆದರೆ ನಿರಂತರವಾಗಿ ಕೆಲಸ ಮಾಡುವುದರ ಜತೆಗೆ ಆದಷ್ಟು ಶೀಘ್ರ ಸೇತುವೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರಾದ ಶ್ರೀಪಾದ ಟಿ.ನಾಯ್ಕ, ಸದಾನಂದ ಎಸ್.ನಾಯ್ಕ ತಿಳಿಸಿದ್ದಾರೆ.