ಶಿರಸಿ: ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ, ಲಯನ್ಸ್ ಶಾಲಾ ಆವರಣದಲ್ಲಿ ನೂತನವಾಗಿ ಆರಂಭವಾಗಲಿರುವ ಪಿಯು ಕಾಲೇಜ್ ಕುರಿತು ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಶಿರಸಿ ಭಾಗಕ್ಕೆ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವು ಆದ ಇಂಟಿಗ್ರೇಟೆಡ್ ಪದವಿಪೂರ್ವ ಶಿಕ್ಷಣ ನೀಡುವ ಸಲುವಾಗಿ ಈ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಪಿ.ಯು. ನಂತರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ.ಇ.ಟಿ., ನೀಟ್, ಜೆ.ಈ.ಈ ಮುಂತಾದ ಪರೀಕ್ಷೆಗಳಿಗೆ ಶಿರಸಿಯಲ್ಲೇ ಗುಣಾತ್ಮಕ ತರಬೇತಿ ಸಾಧ್ಯವಾಗುತ್ತದೆ. ಈ ಮೂಲಕ ಗುಣಾತ್ಮಕ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯನ್ನರಸಿ ಹೊರ ಜಿಲ್ಲೆಗಳಿಗೆ ತೆರಳುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿರಸಿಯಲ್ಲೇ ಶಿಕ್ಷಣ ಹಾಗೂ ತರಬೇತಿ ಲಭ್ಯವಾಗಲಿದೆ.
ಕರ್ನಾಟಕ ಸರ್ಕಾರದ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಅಂತಿಮ ಅನುಮೋದನೆ ದೊರೆತ ತಕ್ಷಣದಲ್ಲಿ ಬರುವ ಶೈಕ್ಷಣಿಕ ವರ್ಷದಿಂದಲೇ ಈ ಪದವಿಪೂರ್ವ ಕಾಲೇಜು ಕಾರ್ಯಾರಂಭವಾಗಲಿದೆ. ಶಿರಸಿ ಲಯನ್ಸ್ ಶಾಲಾ ಆವಾರದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ನಿಯೋಜಿತ ನೂತನ ಪದವಿಪೂರ್ವ ಕಾಲೇಜಿಗೆ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು. ಕಾಲೇಜು ಎಂದು ನಾಮಕರಣ ಮಾಡಲಾಗಿದೆ. ಈ ಕಾಲೇಜು ಬೇಸ್ ಸಂಸ್ಥೆಯ ಜೊತೆ ಶೈಕ್ಷಣಿಕವಾಗಿ ಸಂಯೋಜನೆಗೊಂಡಿದೆ. ಈ ಶೈಕ್ಷಣಿಕ ಒಪ್ಪಂದದ ಕುರಿತು ಔಪಚಾರಿಕವಾಗಿ ಶಿರಸಿ ಲಯನ್ಸ್ ಶಾಲೆಯಲ್ಲಿ ನಡೆದ ಸಭೆಯಲ್ಲಿ ಬೇಸ್ ಸಂಸ್ಥೆಯ ಮುಖ್ಯ ನಿರ್ವಾಹಕರಾದ ಅನಂತ ಕುಲಕರ್ಣಿ, ಯೋಜನಾ ನಿರ್ದೇಶಕರಾದ ಪ್ರಮೋದ, ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಲಯನ್ ಪ್ರೊ. ಎನ್.ವಿ.ಜಿ ಭಟ್, ಉಪಾಧ್ಯಕ್ಷ ಲಯನ್ ಪ್ರಭಾಕರ ಹೆಗಡೆ, ಕಾರ್ಯದರ್ಶಿ ಲಯನ್ ಪ್ರೊ. ರವಿ ನಾಯಕ, ಕೋಶಾಧ್ಯಕ್ಷ ಲಯನ್ ಉದಯ ಸ್ವಾದಿ, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ತ್ರಿವಿಕ್ರಮ ಪಟವರ್ಧನ, ಸಹಕಾರ್ಯದರ್ಶಿ ಲಯನ್ ವಿನಯ್ ಹೆಗಡೆ ಬಸವನಕಟ್ಟೆ, ಸದಸ್ಯರುಗಳಾದ ಲಯನ್ ಶ್ಯಾಮಸುಂದರ ಭಟ್, ಲಯನ್ ಕೆ.ಬಿ. ಲೋಕೇಶ ಹೆಗಡೆ, ಲಯನ್ ಶ್ರೀಕಾಂತ ಹೆಗಡೆ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ ಪಾಲ್ಗೊಂಡಿದ್ದರು.