ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಆನಂದ ಭಟ್ಟ ಒಂಟಿಯಾಗಿ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಬೆಂಗಳೂರಿನ ಬೆಳಂದೂರ್‌ಗೇಟ್ ಬಳಿಯ ಆರ್‌ಕೆಐಎಂಸಿಎಸ್‌ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಅವರು ಆಯೋಗದ ಮುಂದೆ ಹೇಳಿಕೊಂಡಿದ್ದು, ತಮ್ಮ ಒಟ್ಟು ಆಸ್ತಿ 3,74,54,500ರೂ. ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ತಮ್ಮ ಕೈಯಲ್ಲಿ 25 ಸಾವಿರ ರೂ ನಗದು, ಪತ್ನಿ ನವ್ಯಾ ಅವರ ಕೈಯಲ್ಲಿ 10 ಸಾವಿರ ರೂ ನಗದು ಹಣವಿರುವ ಬಗ್ಗೆ ಅವರು ಘೋಷಿಸಿದ್ದಾರೆ.
ಜೊತೆಗೆ ವಿವಿಧ ಬ್ಯಾಂಕ್ ಹಾಗೂ ಸಹಕಾರಿ ಸಂಘದಲ್ಲಿ ಪತಿ-ಪತ್ನಿ ಹೆಸರಿನಲ್ಲಿ ಒಟ್ಟು 97,78,500ರೂ ಹೂಡಿಕೆ (ಎಫ್‌ಡಿ) ಮಾಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಅವರು 7.75 ಲಕ್ಷ ರೂ ಮೌಲ್ಯದ ಕಾರು ಹಾಗೂ 2.37 ಲಕ್ಷ ರೂ ಮೌಲ್ಯದ ಬೈಕ್‌ನ ಮಾಲಕರಾಗಿದ್ದಾರೆ. ಅವರ ಬಳಿ 3.35 ಲಕ್ಷ ರೂ ಮೌಲ್ಯದ ಚಿನ್ನ, ಮಗನ ಬಳಿ 12 ಸಾವಿರ ರೂ ಮೌಲ್ಯದ ಚಿನ್ನ ಹಾಗೂ ಅವರ ಪತ್ನಿ ಬಳಿ 12.50 ಲಕ್ಷ ರೂ ಮೌಲ್ಯದ ಆಭರಣಗಳಿವೆ. 12 ಸಾವಿರ ರೂ ಮೌಲ್ಯದ ಎಲ್‌ಐಸಿ ಪಾಲಿಸಿ, ಪಿತ್ರಾರ್ಜಿತವಾಗಿ ಬಂದ ಕೃಷಿಭೂಮಿ, ಶಿರಸಿ ಯಲ್ಲಾಪುರದಲ್ಲಿ 4 ಕಡೆ ಸ್ವಯಾರ್ಜಿತ ಬೆನ್‌ಶಿತ್ಗಿ ಭೂಮಿ ಸೇರಿ ಒಟ್ಟು 1.67ಕೋಟಿ ರೂ ಮೌಲ್ಯದ ಭೂಮಿಯನ್ನು ಅವರು ಹೊಂದಿದ್ದಾರೆ. ಜೊತೆಗೆ ಅವರಿಗೆ ಹಾಸಣಿಗಿ ಸೇವಾ ಸಹಕಾರಿ ಸಂಘದಲ್ಲಿ 2.25 ಲಕ್ಷ ರೂ ಸಾಲವಿದೆ.