ಶಿರಸಿ: ಇಲ್ಲಿಯ ವಿಶಾಲ ನಗರದ ಶುಭೋದಯದಲ್ಲಿ ಡಾ.ಜಿ.ಎ.ಹೆಗಡೆ ಸೋಂದಾ, ಅದಿತಿ ಹೆಗಡೆ ಕುಟುಂಬದವರು ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮ ಗಂಗಾ ಸಮಾರಾಧನೆ ಕಾರ್ಯಕ್ರಮದಲ್ಲಿ ವೇದಮೂರ್ತಿ ದೇವೇಂದ್ರ ಭಟ್ ಪುರ್ಲೇಮನೆ ವಿದ್ವತ್ ಗೌರವ ಸನ್ಮಾನ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಶಿಷ್ಯರ ಶ್ರೇಯೋಭಿವೃದ್ಧಿಗಾಗಿ ಕೈಗೊಳ್ಳುವ ಪವಿತ್ರ ಕಾರ್ಯ ಪೌರೋಹಿತ್ಯ. ಎಲ್ಲರ ಹಿತವನ್ನು ಬಯಸುವ ವ್ಯಕ್ತಿ ಮಾತ್ರ ಶ್ರೇಷ್ಠ ಪುರೋಹಿತನಾಗಬಲ್ಲ ಎಂದು ಹೇಳಿದರು.
ಪುರೋಹಿತರು ಸಜ್ಜನರಾಗಿ ಸುಮನಸರಾಗಬೇಕು. ಒಳ್ಳೆಯ ಮನದಿಂದ ಕೈಗೊಳ್ಳುವ ಧಾರ್ಮಿಕ ಕಾರ್ಯಗಳಿಗೆ ಉತ್ತಮ ಫಲ ಸಿಗುತ್ತದೆ. ಪುರೋಹಿತರು ಮಾಡಲೇಬೇಕಾದ ಉತ್ತಮ ಕಾರ್ಯ ಶಿಷ್ಯರ ಉನ್ನತಿಯಾಗಿದ್ದು, ಇದು ಅವರ ಹೊಣೆಗಾರಿಕೆಯೂ ಆಗಿದೆ ಎಂದರು.
ದೇವೇಂದ್ರ ಭಟ್ಟರನ್ನು ಸನ್ಮಾನಿಸಿ ಅಭಿನಂದಿಸಿದ ಡಾ.ಜಿ.ಎ.ಹೆಗಡೆ ಸೋಂದಾ, ನಿಜಾರ್ಥದಲ್ಲಿ ಸುರಲೋಕದ ತ್ರಿವಿಷ್ಟಪ ದೇವೇಂದ್ರನಾಗಿ ಪುರೋಹಿತ ಲೋಕದಲ್ಲಿ ದೇವೇಂದ್ರ ಭಟ್ಟರು ಶೋಭಿಸುತ್ತಿದ್ದಾರೆ. ಕಳೆದ 60 ವರ್ಷಗಳಿಂದ ಈ ವೃತ್ತಿಯಲ್ಲಿ ಇರುವ ಭಟ್ಟರು ಶಿಷ್ಯರಿಗೆ ನಿಧಿಯಾಗಿದ್ದಾರೆ. ಅವರಲ್ಲಿ ಇರುವ ಶ್ರದ್ಧೆ, ಭಕ್ತಿ, ಪ್ರೀತಿ, ವಿಶ್ವಾಸ, ಶಿಷ್ಯವಾತ್ಸಲ್ಯಕ್ಕೆ ಬೆಲೆಕಟ್ಟಲಾಗದು. ಜ್ಞಾನವೃದ್ಧರೂ, ವಯೋವೃದ್ಧರೂ, ಗುಣಸಂವರ್ಧನೆಯಿಂದ ಮಾಗಿದ, ಅವರ ಪೌರೋಹಿತ್ಯ ಮೌಲ್ಯಕ್ಕೆ ಶಿರಬಾಗಿ ‘ಪುರೋಹಿತ ನಿಧಿ’ ಎಂಬ ಗೌರವ ನೀಡಿ ವಿಧಿವತ್ತಾಗಿ ನಮ್ಮ ಕುಟುಂಬದಿಂದ ಇವರನ್ನು ಗೌರವಿಸಲು ನಮಗೆಲ್ಲ ಹೆಮ್ಮೆಯಾಗುತ್ತಿದೆ ಎಂದರು.
ಡಾ.ಆದರ್ಶ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಮಹಾದೇವಿ ಹೆಗಡೆ ಕೊಣಿಸರ, ಅದಿತಿ ಹೆಗಡೆ, ಭಾಸ್ಕರ ಭಟ್ಟ ಪುರ‍್ಲೆಮನೆ, ಅಪೂರ್ವ ಹೆಗಡೆ ಸನ್ಮಾನ ವಿಧಿಯಲ್ಲಿ ಸಹಕರಿಸಿದರು.