ಯಲ್ಲಾಪುರ: ಥೈವಾನ್ ದೇಶದ ಕಲ್ಲಂಗಡಿ ಬೀಜ ಕರುನಾಡ ಮಣ್ಣಿಗೆ ಬಿದ್ದು ಇಡೀ ದೇಶಕ್ಕೆ ತನ್ನ ಕಂಪು ಸಾರುತ್ತಿದೆ.
ಅಂಕೋಲಾ ತಾಲೂಕಿನ ದೋಣಗೇರಿ ನಾಗನಮನೆ ಮೂಲದ ಮಹಾಬಲೇಶ್ವರ ಭಟ್ಟ ಎಂಬಾತರು ಬೆಂಗಳೂರು ತೊರೆದು ಯಲ್ಲಾಪುರಕ್ಕೆ ಆಗಮಿಸಿ ಚಂದ್ಗುಳಿ ಬಳಿಯ ಬೊಕ್ಕಳಗುಡ್ಡೆ ಎಂಬಲ್ಲಿ ಬಗೆ ಬಗೆಯ ಕಲ್ಲಂಗಡಿ ಬೆಳೆದಿದ್ದಾರೆ. ಸಾಮಾನ್ಯವಾಗಿ ನದಿ ಅಂಚಿನ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಆದರೆ, ಮಹಾಬಲೇಶ್ವರ ಭಟ್ಟ ಅವರು ಕಬ್ಬು ಬೆಳೆಯುತ್ತಿದ್ದ ಭೂಮಿಯಲ್ಲಿ ಹನಿ ನೀರಾವರಿ ಮೂಲಕ ಕೆಂಪು ಹಾಗೂ ಹಳದಿ ಬಣ್ಣದ ಕಲ್ಲಂಗಡಿ ಬೆಳೆ ತೆಗೆದಿದ್ದಾರೆ. ಬೆಂಗಳೂರಿನಲ್ಲಿ ಕಂಪ್ಯುಟರ್ ರಿಪೇರಿ ಕೆಲಸ ಮಾಡುತ್ತಿದ್ದ ಅವರು 2016ರಲ್ಲಿ ಹಳ್ಳಿಗೆ ಮರಳಿದ್ದು, ಸಹೋದರ ಕೊಡಿಸಿದ ಭೂಮಿಯಲ್ಲಿ ಕಬ್ಬು ಬೆಳೆದಿದ್ದರು. ಅದಾದ ನಂತರ ಮೂರು ವರ್ಷಗಳಿಂದ ಕಲ್ಲಂಗಡಿ ಕೃಷಿ ಮಾಡುತ್ತಿದ್ದಾರೆ.
ಕಿರಣ್, ಆರೋಹಿ, ವಿಶಾಲ್, ಕೃಷ್ಣ, ಸುಪ್ರಿತ್, ಅನುಮೂಲ್ ಎಂಬ ಕಲ್ಲಂಗಡಿಗಳನ್ನು ಅವರು ಏಕಕಾಲದಲ್ಲಿ ಬೆಳೆಯುತ್ತಾರೆ. ಕೆಲ ಕಲ್ಲಂಗಡಿ 18 ಕೆಜಿವರೆಗೆ ತೂಗುತ್ತದೆ. ಗೋವಾ ಹಾಗೂ ಕೇರಳಕ್ಕೆ ಇಲ್ಲಿನ ಹಣ್ಣು ರಪ್ತಾಗುತ್ತದೆ. ಅಲ್ಲಿ ತಯಾರಾಗುವ ತಂಪು ಪಾನೀಯಗಳು ಇಡೀ ದೇಶಕ್ಕೆ ತಲುಪುತ್ತದೆ. ಸ್ಥಳೀಯರು ಸಹ ಅವರ ಮನೆಗೆ ಆಗಮಿಸಿ ಅಗತ್ಯಕ್ಕೆ ಅನುಸಾರವಾಗಿ ಹಣ್ಣುಗಳನ್ನು ಖರೀದಿಸುತ್ತಾರೆ. ಹೆಚ್ಚಿನ ತೇವಾಂಶ ಹಾಗೂ ಸಿಹಿ ಅಂಶವನ್ನು ಹೊಂದಿರುವ ಹಳದಿ ಬಣ್ಣದ ಕಲ್ಲಂಗಡಿಯನ್ನು ಅವರು ಈ ಪ್ರದೇಶಕ್ಕೆ ಹೊಸದಾಗಿ ಪರಿಚಯಿಸಿದ್ದಾರೆ. ಈ ಕಲ್ಲಂಗಡಿ ಹಣ್ಣು ಆಗುವ ಮೊದಲು ತರಕಾರಿಯಂತೆ ಬಳಸಲು ಯೋಗ್ಯ ಎಂಬುದು ವಿಶೇಷ. ತೆಳುವಾದ ಸಿಪ್ಪೆ ಜಾನುವಾರುಗಳಿಗೂ ಅಚ್ಚುಮೆಚ್ಚು.
ಕಲ್ಲಂಗಡಿ ಮೂರು ತಿಂಗಳ ಬೆಳೆ. ವರ್ಷಕ್ಕೆ ಎರಡು ಬಾರಿ ಇದನ್ನು ಅವರು ಬೆಳೆಯುತ್ತಾರೆ. 1 ಎಕರೆ ಪ್ರದೇಶಕ್ಕೆ ಕೂಲಿ ಸೇರಿ 2 ಲಕ್ಷ ರೂ ವೆಚ್ಚವಿದ್ದು, ಬೆಳೆ ಕೈ ಹಿಡಿದರೆ ಅದೇ ಪ್ರಮಾಣದಲ್ಲಿ ಲಾಭವೂ ಇದೆ. ಜಾನುವಾರುಗಳ ಆರೈಕೆಯನ್ನು ಮಾಡುವ ಮಹಾಬಲೇಶ್ವರ ಭಟ್ಟರು ಜೀವಾಮೃತ ಹಾಗೂ ಜೀವರಸ ಸಿದ್ಧಪಡಿಸಿ ಬೆಳೆಗಳಿಗೆ ಕೊಡುತ್ತಾರೆ. ಇದು ರೋಗಬಾಧೆಗೂ ಮುಕ್ತಿ ನೀಡುತ್ತದೆ ಎಂಬುದು ಅವರ ನಂಬಿಕೆ. ಪ್ರತಿ ದಿನ ಗಿಡಗಳಿಗೆ ನೀರುಣಿಸುವುದು, ಅಗತ್ಯ ಗೊಬ್ಬರ ನೀಡುವುದು, ಎಲ್ಲಾ ಗಿಡಗಳನ್ನು ಮುಟ್ಟಿ ಮಾತನಾಡಿಸುವುದು ಅವರ ನಿತ್ಯದ ದಿನಚರಿ. ಇತರೆ ಬೆಳೆಗಳಿಗೆ ಹೋಲಿಸಿದರೆ ಕಲ್ಲಂಗಡಿ ಗಿಡಗಳ ಆರೈಕೆಗೆ ಒಬ್ಬರು ಸಾಕು. ಕೂಲಿ ಆಳುಗಳ ಮೇಲೆ ವರ್ಷವಿಡೀ ಅವಲಂಭಿತರಾಗಬೇಕಿಲ್ಲ ಎಂಬುದು ಅವರ ಅನುಭವದ ಮಾತು. ಹೆಚ್ಚಿನ ಸ್ವಾದ ಹೊಂದಿರುವ ಹಳದಿ ಕಲ್ಲಂಗಡಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚು ಪರಿಚಯವಾಗಿಲ್ಲ.
ಯಲ್ಲಾಪುರದಲ್ಲಿನ ಕಲ್ಲಂಗಡಿ ಹಣ್ಣಿಗೆ ನೆರೆರಾಜ್ಯದಲ್ಲಿ ಭಾರೀ ಬೇಡಿಕೆ
