ಸಿದ್ದಾಪುರ: ಕರ್ನಾಟಕದ ರೈತರ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಮಿಲ್ಕ ಫೆಡರೇಶನ್‌ನ್ನು ಗುಜರಾತಿನ ಅಮೂಲ್ ಸಂಸ್ಥೆಯ ಜೊತೆಗೆ ಸೇರ್ಪಡೆಗೊಳಿಸುವ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸೇರ್ಪಡೆಯ ಚಿಂತನೆಗೆ ಸರಕಾರ ಮುಂದಾದಲ್ಲಿ ರೈತರು,ಹೈನುಗಾರರು ತೀವ್ರವಾದ ಪ್ರತಿಭಟನೆ ನಡೆಸುವದು ಶತಸಿದ್ಧ ಎಂದು ಉತ್ತರ ಕನ್ನಡ ಜಿಲ್ಲಾ ರೈತ ಸಂಘ(ರಿ)ದ ಅಧ್ಯಕ್ಷ ಕೆರಿಯಪ್ಪ ನಾಯ್ಕ ಬೇಡ್ಕಣಿ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆ.ಎಂ.ಎಫ್ ಸಂಸ್ಥೆಯು ದೀರ್ಘಕಾಲದಿಂದ ರೈತರ,ಹೈನುಗಾರರ ನೆರವಿಗೆ ಶ್ರಮಿಸುತ್ತಿದೆ. ಜಾನುವಾರುಗಳಿಗೆ ಬಾಧಿಸುತ್ತಿರುವ ಗಂಟುರೋಗ ಮುಂತಾದ ಕಾಯಿಲೆ, ಹಸಿಮೇವಿನ ಕೊರತೆಯ ಕಾರಣಕ್ಕೆ ಹಾಲು ಉತ್ಪಾದನೆ ಕಡಿಮೆಯಾಗಿದ್ದು ಗುಜರಾತಿನ ಅಮೂಲ್ ಸಂಸ್ಥೆಯಿ0ದ ಹಾಲು ಪಡೆಯುವ ಅನಿವಾರ್ಯತೆ ಉಂಟಾಗಿದೆ. ನಮ್ಮಲ್ಲಿನ ಜಾನುವಾರುಗಳ ರೋಗನಿಯಂತ್ರಣ ಮಾಡುವ ಹಾಗೂ ವುಗಳಿಗೆ ಕಡಿಮೆ ದರದಲ್ಲಿ ಪೌಷ್ಠಿಕ ಆಹಾರ ಒದಗಿಸಲು ರಾಜ್ಯ ಸರಕಾರ ಮುಂದಾಗಬೇಕು. ವೈಜ್ಞಾನಿಕ ತೊಂದರೆ ಗುರುತಿಸಿ ಸರಪಡಿಸುವದರ ಜೊತೆಗೆ ಹಾಲಿನ ಉತ್ಪಾದನೆ ಹೆಚ್ಚಿಸುವದರ ಬಗ್ಗೆ ನಿಗಾವಹಿಸಬೇಕು. 2 ಆಕಳುಗಳಿಂದ ಜೀವನ ಮಾಡುವ ಸಾವಿರಾರು ಕುಟುಂಬಗಳು ನಮ್ಮಲ್ಲಿವೆ. ಅತಿ ಮಳೆ,ಬಿಸಿಲಿನ ಕಾರಣ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆ ಕಷ್ಟವಾಗುತ್ತಿದೆ. ಪ್ರತಿ ತಾಲೂಕಿನ ಕಂದಾಯ ಭೂಮಿಗಳಲ್ಲಿ ರೈತರ ಸಹಭಾಗಿತ್ವದಲ್ಲಿ ಹುಲ್ಲುಗಾವಲು ರೂಪಿಸುವದರಿಂದ ಹಸಿಮೇವಿನ ಕೊರತೆ ನೀಗಲು ಸಾಧ್ಯವಾಗುತ್ತದೆ. ಜನರಿಗೆ ಪುಕ್ಕಟೆಯಾಗಿ ಅಕ್ಕಿ,ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುವಂತೆ ಕಡಿಮೆ ದರದಲ್ಲಿ ಜಾನುವಾರುಗಳ ಆಹಾರ ಒದಗಿಸಲು ಸರಕಾರ ಮುಂದಾಗುವ ಮೂಲಕ ರೈತರ ನೆರವಿಗೆ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಅರಣ್ಯಭೂಮಿ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡುವ, ಮಂಜೂರಿ ಮಾಡುವ ಇಶ್ಚಾಶಕ್ತಿಯನ್ನು ಸರಕಾರ ತೋರಿಸಿಲ್ಲ.ಕೂಡಲೇ ಆ ಬಗ್ಗೆ ಗಮನಹರಿಸಬೇಕು. ವಿದ್ಯುತ್ ದರ 3 ಪಟ್ಟು ಹೆಚ್ಚಿದ್ದು ವಿದ್ಯುತ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಕೃಷಿ ಕಾಯ್ದೆಯನ್ನು ರಾಜ್ಯ ಸರಕಾರ ವಾಪಸ್ ಪಡೆದಿಲ್ಲ. ಅದನ್ನು ವಾಪಸ್ ಪಡೆಯಲು ಜಿಲ್ಲೆಯ ರೈತರ ಪರವಾಗಿ ಆಗ್ರಹಿಸುತ್ತೇವೆ. ರೈತರ ಜಮೀನುಗಳ ಪಹಣಿಯಲ್ಲಿ ಕರ್ನಾಟಕ ಸರಕಾರ ಎಂದು ನಮೂದಾಗಿದ್ದು ಅದನ್ನು ಸರಿಪಡಿಸಬೇಕು. ಪ್ರತಿ ಪಹಣಿಪತ್ರಿಕೆಗೆ 25 ರೂ.ಶುಲ್ಕ ವಿಧಿಸುವದನ್ನು ಬದಲಾಯಿಸಿ 5ರೂ.ಗೆ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕೆರಿಯಪ್ಪ ನಾಯ್ಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಜಿ.ಟಿ.ನಾಯ್ಕ ಮಾವಿನಗುಂಡಿ, ಪ್ರಧಾನ ಕಾರ್ಯದರ್ಶಿ ಗೀತಾ ಹೆಗಡೆ, ಜಿಲ್ಲಾ ಸಮಿತಿ ಸದಸ್ಯ ಜಿ.ಬಿ.ನಾಯ್ಕ ಇದ್ದರು.