ಗುವಾಹಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸ್ಸಾಂನ ತೇಜ್‌ಪುರ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಇಂದು ಐತಿಹಾಸಿಕ ಪಯಣ ಬೆಳೆಸಿದರು.
ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆ ಮತ್ತು ಹಿಮಾಲಯದ ವೀಕ್ಷಣೆ ಮಾಡಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ವಾಯುಪಡೆಯ ನಿಲ್ದಾಣಕ್ಕೆ ಮರಳಿದರು. 106 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ನವೀನ್ ಕುಮಾರ್ ಅವರು ವಿಮಾನವನ್ನು ಹಾರಿಸಿದರು.
ವಿಮಾನವು ಸಮುದ್ರ ಮಟ್ಟದಿಂದ ಸುಮಾರು ಎರಡು ಕಿಲೋಮೀಟರ್ ಎತ್ತರದಲ್ಲಿ ಮತ್ತು ಗಂಟೆಗೆ ಸುಮಾರು 800 ಕಿಲೋಮೀಟರ್ ವೇಗದಲ್ಲಿ ಹಾರಿತು.
ಬಳಿಕ ಮಾತನಾಡಿದ ಮುರ್ಮು, ಭಾರತೀಯ ವಾಯುಪಡೆಯ ಸುಖೋಯ್ -30 MKI ಯುದ್ಧ ವಿಮಾನದಲ್ಲಿ ಹಾರಿದ್ದು ನನಗೆ ಆಹ್ಲಾದಕರ ಅನುಭವವಾಗಿದೆ . ಭಾರತದ ರಕ್ಷಣಾ ಸಾಮರ್ಥ್ಯವು ನೆಲ, ವಾಯು, ಸಮುದ್ರದ ಎಲ್ಲಾ ಗಡಿಗಳನ್ನು ಆವರಿಸಿ ಅಗಾಧವಾಗಿ ವಿಸ್ತರಿಸಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.