ಕುಮಟಾ: ನಾಗರಿಕ ಪ್ರಜ್ಞೆ ಇಲ್ಲದವರಿಗೆ ಪಾಠ ಕಲಿಸುವ ಸಲುವಾಗಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಪಾನ್ ಜಗಿಯುವ ಪ್ರಯಾಣಿಕರೊಬ್ಬರು ಪ್ಲಾಟ್‌ಫಾರ್ಮ್ ನಲ್ಲಿ ಉಗುಳಿದ ನಂತರ, ಸಾರ್ವಜನಿಕರು ಅದನ್ನು ಆತನೇ ಸ್ವಚ್ಛಗೊಳಿಸುವಂತೆ ಮಾಡಿದ್ದಾರೆ.
ಕಾರವಾರಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಪಾನ್ ಅನ್ನು ಪ್ಲಾಟ್‌ಫಾರ್ಮ್ ನಲ್ಲಿ ಉಗುಳಿರುವ ಘಟನೆ ನಡೆದಿದೆ. ಈ ವೇಳೆ ಅಲ್ಲಿ ನಿಂತಿದ್ದವರು ಸಿಟ್ಟಿಗೆದ್ದು, ಇದು ಉಗುಳುವ ಸ್ಥಳವೇ ಎಂದು ಆತನನ್ನು ಪ್ರಶ್ನಿಸಿದ್ದಾರೆ. ನೀವು ಹೇಗೆ ಅನಾಗರಿಕರಾಗಿದ್ದೀರಿ? ಎಂದು ಮತ್ತೋರ್ವ ಪ್ರಯಾಣಿಕರು ಪ್ರಶ್ನಿಸಿದರೆ, ಅಲ್ಲೇ ಇದ್ದ ಮತ್ತೊಬ್ಬರು, ಈ ಸ್ಥಳವನ್ನು ಆತನೇ ಸ್ವಚ್ಛಗೊಳಿಸಲಿ ಎಂಬ ಕಲ್ಪನೆಯನ್ನು ಮುಂದಿಟ್ಟರು. ಪಾನ್ ಉಗುಳಿದ್ದ ವ್ಯಕ್ತಿಯೇ ತನ್ನ ಬಳಿಯಿರುವ ಬಟ್ಟೆಯಿಂದ ಆ ಸ್ಥಳವನ್ನು ಒರೆಸಬೇಕೆಂದು ಒತ್ತಾಯಿಸಿದರು.
ಅಷ್ಟರಲ್ಲಾಗಲೇ ಬಸ್ ಹೊರಡುವ ಸೂಚನೆ ನೀಡುತ್ತಾ ಹಾರ್ನ್ ಮಾಡತೊಡಗಿತು. ಇದನ್ನೇ ನೆಪವಾಗಿಟ್ಟುಕೊಂಡ ಆತ, ತನ್ನ ಹೆಸರನ್ನು ಹೇಳಲು ನಿರಾಕರಿಸಿ ತಾನು ಹೋಗಬೇಕೆಂದು ಹೇಳುತ್ತಾನೆ. ಆದರೆ, ಇತರರು, ಬಸ್ ಎಲ್ಲಿಗೆ ಹೋಗುತ್ತದೆ? ನಾವು ಅದನ್ನು ನಿಲ್ಲಿಸುತ್ತೇವೆ. ಬಟ್ಟೆಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಎಂದು ಪಟ್ಟು ಹಿಡಿದರು. ಬಳಿಕ ವ್ಯಕ್ತಿ ಬಸ್ಸಿನಿಂದ ಕೆಳಗಿಳಿದು, ಬಟ್ಟೆ ಮತ್ತು ನೀರನ್ನು ತಂದು ನೆಲದ ಮೇಲಿನ ಪಾನ್ ಕಲೆಯನ್ನು ತಾನೇ ಸ್ವಚ್ಛಗೊಳಿಸಿದನು. ಇಡೀ ಘಟನೆ ಮೊಬೈಲ್‌ನಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ.