ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾ.ಪಂನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸಿ ಅವ್ಯವಹಾರ ನಡೆಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ್ ಗಾಂವಕರ ಮತ್ತು ಗ್ರಾಮಸ್ಥರು ಆರೋಪಿಸಿದ್ದು ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೋಂಗ್ರಿ ಗ್ರಾ.ಪಂ.ನ ಅನುದಾನದಲ್ಲಿ ಕುಡಿಯುವ ನೀರಿನ ಪೈಪಲೈನ್ ದುರಸ್ತಿಗೆಂದು ಒಟ್ಟೂ ರೂ.1,87,410 ಖರ್ಚು ಮಾಡಲಾಗಿದೆ. ಆದರೆ ಲೆಕ್ಕಪತ್ರದಲ್ಲಿ ತೋರಿಸಿದಂತೆ ಎಲ್ಲೂ ಕೂಡ ಕಾಮಗಾರಿ ನಡೆಸಿದ್ದು ಕಂಡುಬಂದಿಲ್ಲ. ಆದರೂ ಸಾಮಗ್ರಿಗಳನ್ನು ಖರೀದಿಸಿದ ಬಿಲ್ಲುಗಳನ್ನು ಖರ್ಚು ಹಾಕಿ ಹಣ ಸಂದಾಯವಾಗಿದೆ. ಈ ಕುರಿತು ಸಂಶಯಗೊಂಡ ಶಿವರಾಮ ಗಾಂವಕರ ಗ್ರಾಮಸ್ಥರ ಪರವಾಗಿ ಮಾಹಿತಿ ಹಕ್ಕಿನಡಿ ವಿವರ ಪಡೆದಾಗ ಹಣದ ಅವ್ಯವಹಾರ ನಡೆಸಿದ ಬಗ್ಗೆ ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಇದರ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ ನೀಡಲಾಗಿದೆ. ನ್ಯಾಯ ಸಿಗದಿದ್ದರೆ ಚುನಾವಣೆಯ ನಂತರ ಧರಣಿ ನಡೆಸಲಾಗುವದು ಎಂದರು.
ಡೋಂಗ್ರಿ ಗ್ರಾ.ಪಂ.ವ್ಯಾಪ್ತಿಯಲ್ಲಿನ ಕೆರೆಗದ್ದೆ ಕುಡಿಯುವ ನೀರಿನ ಯೋಜನೆಯ ಪೈಪಲೈನ್ ದುರಸ್ತಿಗೆಂದು 2022ರ ಸೆ.15 ರಂದು ಖರೀದಿಸಿದ ಸಾಮಗ್ರಿ ಬಿಲ್ ಮೊತ್ತ ರೂ.35560=00 ಹಾಗೂ 2022 ಸೆ. 12 ರಂದು ಡೋಂಗ್ರಿ ವಾರ್ಡಿನ ಕುಡಿಯುವ ನೀರಿನ ಪೈಪಲೈನ್ ದುರಸ್ತಿ ಎಂದು ಖರೀದಿಸಿದ ಸಾಮಗ್ರಿಬಿಲ್ ಮೊತ್ತ ರೂ. 32540=00 ಹಾಗೂ ದಿನಾಂಕವೇ ಇಲ್ಲದ ಬಿಲ್ ಒಂದರಂತೆ ರೂ.69000=00 ಮತ್ತು ಕಾಮಗಾರಿಗೆ ಸಂಬಂಧಿಸಿದಂತೆ ಮಜೂರಿ, ಇತರೆ ಸೇರಿದಂತೆ ಒಟ್ಟೂ ರೂ.1,87,410 ಖರ್ಚು ತೋರಿಸಲಾಗಿದೆ. ಮಾಹಿತಿ ಹಕ್ಕಿನಡಿ ಕಾಮಗಾರಿಯ ಕುರಿತು ಮಾಹಿತಿ ಪಡೆದಾಗ ಪಂಚಾಯತದವರು ನೀಡಿದ ವಿವರ ಮತ್ತು ಪೇಮೆಂಟ್ ಮಾಡಿದ ಬಗ್ಗೆ ಕ್ಯಾಶ್ ಬುಕ್ ವಿವರ ಸಾಕಷ್ಡು ಅನುಮಾನಗಳಿಗೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ವ್ಯಯ ಮಾಡಿ 2022ರ ಅಕ್ಟೋ ರ 20 ರಂದು ಸಂಪೂರ್ಣ ಹಣ ಪಾವತಿಯಾದ ನಂತರದಲ್ಲಿ ಅಂದರೆ ನವೆಂಬರ 10 ರಂದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಠರಾವು ಪಾಸು ಮಾಡಲಾಗಿದೆ. ಇದೂ ಕೂಡ ಅವ್ಯವಹಾರ ನಡೆದಿರುವದಕ್ಕೆ ಪೂರಕ ಸಾಕ್ಷಿಯಾಗಿದೆ ಎಂದು ಶಿವರಾಮ ಗಾಂವಕರ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ಥರೂ ಮಾತನಾಡಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಮಾಡಿಲ್ಲ ಇಲ್ಲಿ ಯಾರಿಗೂ ಕೂಡ ನಾಲ್ಕೈದು ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯ ಸಿಗುತ್ತಿಲ್ಲ ಇದರ ಕುರಿತು ಸಮಗ್ರ ತನಿಖೆಯಾಗಲೇಏಕು ಎಂದರು. ಅಲ್ಲದೆ ಕಾಮಗಾರಿ ನಡೆಸಿದ್ದಾರೆ ಎನ್ನಲಾದ ಸ್ಥಳಗಳಿಗೆ ಮಾದ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಒಡೆದ ಹಳೆಯ ಪೈಪಗಳು ಹಾಗೂ ಸಂಪರ್ಕವೇ ಇಲ್ಲದ ಹಳೆಯ ಪೈಪುಗಳು ಈಗಲೂ ಹಾಗೆಯೇ ಉಳಿದಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೇಶವ ನಾಯ್ಕ, ಶಂಕರ ನಾಯ್ಕ, ದಿನಕರ ನಾಯ್ಕ, ಲಂಬೋಧರ ನಾಯ್ಕ, ರಮೇಶ ನಾಯ್ಕ, ಮೋಹನ ಕೆ.ಪಡ್ತಿ, ನೀಲಕಂಠ ನಾಯ್ಕ, ಕೇಶವ ನಾಯ್ಕ, ರಮೇಶ ನಾಯ್ಕ, ಶೀಲಾ ನಾಯ್ಕ, ನಾಗರಾಜ ನಾಯ್ಕ ಇನ್ನಿತರರು ಇದ್ದರು.