ಶಿರಸಿ: ಇಲ್ಲಿಯ ಐತಿಹಾಸಿಕ ಮಾತೋಬಾರ ಮಧುಕೇಶ್ವರ ದೇವಸ್ಥಾನದ ಶ್ರೀ ಉಮಾಮಧುಕೇಶ್ವರ ದೇವರ ವಾರ್ಷಿಕ ಮಹಾರಥೋತ್ಸವು ಭಾನುವಾರದಂದು ಸಂಭ್ರಮದಿಂದ ಜರುಗಿತು.
ಭಾನುವಾರ ಬೆಳಗ್ಗೆ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಬಲಿ, ಜಪ, ಹವನ ನಡೆಸಲಾಯಿತು.ಬಳಿಕ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆಯ ನಂತರ ಮಹಾಸ್ಯಂದನ ರಥಕ್ಕೆ ಪೂಜೆ ಸಲ್ಲಿಸಿ ಶ್ರೀ ಉಮಾಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ಮನ್ಮಹಾಸ್ಯಂದನ ರಥದಲ್ಲಿ ಪ್ರತಿಷ್ಠಾಪಿಸಿ ನಂತರ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಯಿತು. ಸಾವಿರಾರು ಭಕ್ತರು ಸುಡುವ ಬಿಸಿಲನ್ನು ಲೆಕ್ಕಿಸದೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ರಾತ್ರಿ 12-30ಕ್ಕೆ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರ ಹರ್ಷೋದ್ಗಾರದ ನಡುವೆ ಶ್ರೀ ಮಧುಕೇಶ್ವರ ದೇವರ ಮಹಾರಥೋತ್ಸವ ಆರಂಭಗೊಂಡಿತು. ಬೃಹತ್ ರುದ್ರಾಕ್ಷಿ ಮಾಲೆ, ವಿವಿಧ ಫಲ ಪುಷ್ಪ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಹಾರಥವನ್ನು ಭಕ್ತ ಸಮೂಹ ಹರಹರ ಮಹಾದೇವ ಎಂಬ ಘೋಷ ಮೊಳಗಿಸುತ್ತ ಸಾಗಿದರು. ವಿವಿಧ ವಾದ್ಯ ಮೇಳಗಳು ರಥೋತ್ಸವಕ್ಕೆ ಭಕ್ತಿಯ ಮೆರಗು ನೀಡಿತು. ನೆರೆದಿದ್ದ ಸಾವಿರಾರು ಭಕ್ತರು ಹೂ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ವಯಸ್ಕರು,ಪುರುಷರು, ಮಹಿಳೆಯರು, ಮಕ್ಕಳು ಜಾತಿ ಭೇದವನ್ನು ಮರೆತು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡರು. 5 ಗಂಟೆಗಳ ಕಾಲ ಜರುಗಿದ ಮಹಾ ರಥೋತ್ಸವ ಸೋಮವಾರ ಮುಂಜಾನೆ 5.30ರ ಹೊತ್ತಿಗೆ ಸಂಪನ್ನಗೊಂಡಿತು.