ಬೆಳಗಾವಿ: ಹೆಂಡತಿಯ ಕಾಟದಿಂದ ಬೇಸತ್ತು ಗೋವಾದ ಕ್ಯಾಸಿನೋಗೆ ತೆರಳೋ ಯೋಜನೆಯಲ್ಲಿ 26 ಲಕ್ಷ ಹಣವನ್ನು ಕಾರಿಗೆ ತುಂಬಿಕೊಂಡು ತೆರಳಿದ್ದ ಗುತ್ತಿಗೆದಾರನೊಬ್ಬನಿಗೆ ಚುನಾವಣಾ ನೀತಿ ಸಂಹಿತೆ ಬಿಸಿ ತಾಕಿದೆ.
ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದ ವ್ಯಕ್ತಿ, ಹೆಂಡತಿಯ ಕಾಟದಿಂದ ಬೇಸತ್ತಿದ್ದನು. ಈ ಕಾರಣದಿಂದಾಗಿಯೇ ಗೋವಾದಲ್ಲಿನ ಕ್ಯಾಸಿನೋಗೆ ತೆರಳೋ ಪ್ಲಾನ್ ಮಾಡಿದ್ದನು. ಅದಕ್ಕಾಗಿ ಗೂಗಲ್ ಮ್ಯಾಪ್ ಸರ್ಚ್ ಮಾಡಿ, ಮುಂಬೈನಿಂದ ಗೋವಾಗೆ ತನ್ನ ಕಾರಿನಲ್ಲಿ ಮನೆಯಿಂದ 26 ಲಕ್ಷ ಹಣ ತುಂಬಿಕೊಂಡು ತೆರಳಿದ್ದ. ಬೆಳಗಾವಿಯ ಕರ್ನಾಟಕ ಚೌಕ್ ಬಳಿಯಲ್ಲಿ ಮುಂಬೈನಿಂದ ಬರುತ್ತಿದ್ದಂತ ಕಾರುಗಳನ್ನು ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಚೆಕ್ ಮಾಡಲಾಗುತ್ತಿತ್ತು. ಮುಂಬೈನಿಂದ 26 ಲಕ್ಷ ಕಾರಿನಲ್ಲಿ ತುಂಬಿಕೊಂಡು ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದ ಗುತ್ತಿಗೆದಾರನ ಕಾರು ಚೆಕ್ ಮಾಡಿದಾಗ ಹಣ ಪತ್ತೆಯಾಗಿದೆ.
ಈ ಬಗ್ಗೆ ಚೆಕ್ ಪೋಸ್ಟ್ ನಲ್ಲಿದ್ದಂತ ಸಿಬ್ಬಂದಿ ವಿಚಾರಣೆ ನಡೆಸಿದಾಗ, ತಾನು ಹೆಂಡತಿಯ ಕಾಟ ತಾಳಲಾರದೇ ನೆಮ್ಮದಿ ಅರಸಿ ಗೋವಾಕ್ಕೆ ತೆರಳುತ್ತಿದ್ದೆನು. ಮುಂಬೈನಲ್ಲಿ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದೇನೆ. ಆನ್‌ಲೈನ್ ಪೇಮೆಂಟ್ ಮಾಡಿದರೆ ಪತ್ನಿ ಚೆಕ್ ಮಾಡುತ್ತಾಳೆ ಎನ್ನುವ ಕಾರಣ ಕಾರಿನಲ್ಲಿ 26 ಲಕ್ಷ ಕ್ಯಾಶ್ ತುಂಬಿಕೊಂಡು ಬಂದಿದ್ದೆನು. ತಪ್ಪಾಗಿ ಸಿಟಿಗೆ ಬಂದು ಬಿಟ್ಟೆ. ಕ್ಷಮಿಸಿ ಎಂಬುದಾಗಿ ಹೇಳಿದ್ದಾನೆ.