ಕಾರವಾರ: ನಾಮಧಾರಿ ಸಮಾಜದ ಅಭ್ಯರ್ಥಿಯನ್ನ ಕಡೆಗಣಿಸುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ನಾನು ನಾಮಧಾರಿ ಸಮುದಾಯದ ವಿರೋಧಿಯಲ್ಲ ಎಂದು ಮಾಜಿ ಸಚಿವ, ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಹುಸಂಖ್ಯಾತ ನಾಮಧಾರಿಗಳಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಕೊಡದಂತೆ ಮಾಜಿ ಸಚಿವ ದೇಶಪಾಂಡೆ ಕುತಂತ್ರ ನಡೆಸಿದ್ದಾರೆ ಎಂದು ಈಡಿಗ ಮಹಾಸಭಾದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ನಾನು ಎಲ್ಲಾ ಸಮುದಾಯವರನ್ನು ಸಮಾನವಾಗಿ ಕಾಣುತ್ತಾ ಬಂದಿದ್ದು, ಜಾತಿ ಆಧಾರದಲ್ಲಿ ಎಂದೂ ಮನ್ನಣೆ ನೀಡಿಲ್ಲ. ನನ್ನ ಜಿಲ್ಲೆಯ ಪ್ರತಿಯೊಂದು ಸಮುದಾಯದ ಜನ ಮುನ್ನಲೆಗೆ ಬಂದರೆ ಅತಿಯಾಗಿ ಸಂತೋಷ ಪಡುವ ವ್ಯಕ್ತಿಗಳಲ್ಲಿ ನಾನು ಮೊದಲಿಗನಾಗಿರುತ್ತೇನೆ. ನಾಮಧಾರಿ ಸಮಾಜ ಭಾಂಧವರು ಈ ಹಿಂದಿನಿoದಲೂ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನನಗೆ ಬೆಂಬಲ ನೀಡುತ್ತ ಬಂದಿದ್ದಾರೆನ್ನುವುದು ನಿಸ್ಸಂಶಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯಾತ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆನ್ನುವುದು ನನ್ನ ಒತ್ತಾಯ ಕೂಡ ಆಗಿದೆ ಎಂದಿದ್ದಾರೆ.
ನಾಮಧಾರಿ ಸಮಾಜದ ಅಭ್ಯರ್ಥಿಗಳನ್ನು ಕಡೆಗಣಿಸುತ್ತಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ನಮ್ಮ ನಡುವೆ ದ್ವೇಷದ ಕಿಡಿಯನ್ನು ಹಚ್ಚಲಾಗುತ್ತಿದೆ. ಈ ವಿಷಯದಲ್ಲಿ ಸ್ವಾಮೀಜಿಗಳಿಗೆ ತಪ್ಪು ಗ್ರಹಿಕೆ ಆಗಿರಬಹುದು. ಇಂತಹ ಸತ್ಯಕ್ಕೆ ದೂರವಾದ ಸುದ್ದಿಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೆಂದು, ಜೊತೆಗೆ ಪ್ರಣವಾನಂದ ಸ್ವಾಮೀಜಿಯವರಿಗೆ ಸಹ ಮನವಿ ಮಾಡುತ್ತೇನೆ ಎಂದು ದೇಶಪಾಂಡೆ ತಿಳಿಸಿದ್ದಾರೆ.