ಕೊಡಗು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೂರು ದಿನದಲ್ಲಿ ಕೊಡಗಿನಲ್ಲಿ 2 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
ಮಡಿಕೇರಿ ಕ್ಷೇತ್ರದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಮಂತರ್‌ಗೌಡ ಹಾಗೂ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್‌ಗೆ ಕಾರಣ ಕೇಳಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಮಂತರ್‌ಗೌಡ ಅವರು ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಪಕ್ಷದ ಚಿಹ್ನೆಯನ್ನು ಬಳಸಿ ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿಯ ಕುರಿತು ಶುಭಾಶಯವನ್ನು ಕೋರಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ.
ಹೀಗಾಗಿ, ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಪಕ್ಷದ ಚಿಹ್ನೆ ಬಳಸಿ ರಾಮನವಮಿಗೆ ಶುಭ ಕೋರಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ಚುನಾವಣಾಧಿಕಾರಿ ನೋಟಿಸ್ ನೀಡಿದ್ದಾರೆ.
ಲಿಖಿತ ಸಮಜಾಯಿಷಿ ನೀಡುವಂತೆ ಸೂಚನೆ: ಅಲ್ಲದೆ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ವಿ.ಪಿ.ಶಶೀಧರ್ ಅವರು ಆಡ್ಮಿನ್ ಆಗಿರುವ ವಾಟ್ಸ್ಅಪ್‌ವೊಂದರ ಮೂಲಕ ಯಾವುದೇ ಪೂರ್ವಾನುಮತಿ ಪಡೆಯದೇ ರಾಜಕೀಯ ಪ್ರೇರಿತ ವಿಡಿಯೋ ತುಣುಕು ಹಂಚಿಕೊAಡ ವಿಚಾರವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂದು ಕಾರಣ ಕೇಳಿ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ನೀಡುವಂತೆ ಮಡಿಕೇರಿ ವಿಧಾನಸಭಾ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.