ಕಾರವಾರ: ಮಾರ್ಚ್ 8ರಂದು ಧರ್ಮಶಾಲಾದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ದಲೈಲಾಮಾ ಅವರಿಂದ 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಘೋಷಿಸಿಲ್ಪಟ್ಟ ಅಮೆರಿಕಾ ಮೂಲದ 8 ವರ್ಷದ ಮಂಗೋಲಿಯನ್ ಬಾಲಕ ಸನ್ಯಾಸತ್ವ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಮುಂಡಗೋಡಕ್ಕೆ ಬರಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಸನ್ಯಾಸತ್ವ ಅಧ್ಯಯನಕ್ಕೆ ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಮುಂಡಗೋಡ ಉತ್ತಮ ಸೌಕರ್ಯಗಳಿಂದ ಕೂಡಿರುವುದರಿಂದ ಅಧ್ಯಾತ್ಮಿಕ ಅಧ್ಯಯನಕ್ಕಾಗಿ ಬಾಲಕ ಇಲ್ಲಿಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಒಂಬತ್ತನೇ ಖಲ್ಖಾ ಜೆಟ್ಸುನ್ ದಂಪಾ ಶಿಮ್ಲಾದ ಜೊನಾಂಗ್ ಟಕ್ಟೆನ್ ಫುಂಟ್ಸಾಕ್ ಚೋಲಿಂಗ್ ಬೌದ್ಧ ಮಠದೊಂದಿಗೆ ಸಂಯೋಜಿತವಾಗಿದೆ. ಜೋನಾಂಗ್ ಮಠದಲ್ಲಿರುವ ಕೆಲವು ಸನ್ಯಾಸಿಗಳು ಮುಂಡಗೋಡಿನ ಡ್ರೆಪುಂಗ್ ಮಠದಲ್ಲಿ ಅಧ್ಯಯನ ಮಾಡುತ್ತಾರೆ. ಬಾಲಕ ಇವರಿಂದ ಅಧ್ಯಯನದ ನೆರವು ಪಡೆಯಲಿದ್ದಾರೆಂದು ಮೂಲಗಳು ತಿಳಿಸಿವೆ.
ಧರ್ಮಶಾಲಾದಲ್ಲಿ ಮಾರ್ಚ್ 8ರಂದು ನಡೆದ ಸಮಾರಂಭದಲ್ಲಿ ಎಂಟು ವರ್ಷದ ಬಾಲಕನಿಗೆ ದಲೈ ಲಾಮಾ ದೀಕ್ಷೆ ನೀಡಿದ್ದು, ಬಾಲಕನೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಮಂಗೋಲಿಯಾದ ಅತಿದೊಡ್ಡ ಗಂದನ್‌ಟೆಗ್‌ಚಿನ್ಲೆನ್ ಮಠದಲ್ಲಿ ನಡೆದ ಸಮಾರಂಭದಲ್ಲಿ ಹತ್ತನೇ ಖಲ್ಕಾ ಆಗಿ ಆಯ್ಕೆ ಮಾಡಲಾಗಿದೆ. ಮಾರ್ಚ್ 8ರಂದು ನಡೆದ ಸಮಾರಂಭದಲ್ಲಿ ಬಾಲಕನ ಜೊತೆ ಕಾರ್ಯಕ್ರಮದಲ್ಲಿ ದಲೈ ಲಾಮ ಭಾಗವಹಿಸಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಣೆಯಾದ ಈ ಎಂಟು ವಷÀðದ ಬಾಲಕ 2015ರಲ್ಲಿ ಯುಎಸ್‌ನಲ್ಲಿ ಜನಿಸಿದ್ದು, ತಂದೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮಂಗೋಲಿಯನ್ ಸಂಸತ್ತಿನ ಮಾಜಿ ಸದಸ್ಯನ ಮೊಮ್ಮಗ ಈತ ಎಂದು ವರದಿಯಾಗಿದೆ. ಅಲ್ಲದೇ ಈ ಬಾಲಕನಿಗೆ ಅಮೆರಿಕಾದಲ್ಲಿ ಇಬ್ಬರು ಅವಳಿ ಸಹೋದರರು ಕೂಡ ಇದ್ದಾರೆ ಎನ್ನಲಾಗಿದೆ.
ದಲೈ ಲಾಮಾ ಅವರು ಈ ಮಗುವನ್ನು 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಪುನರ್ಜನ್ಮ (ತುಲ್ಕು) ಎಂದು ಬಣ್ಣಿಸಿದ್ದಾರೆ. ಬೌದ್ಧಧರ್ಮದಲ್ಲಿ ಧಾರ್ಮಿಕ ಮುಖಂಡರ ಪುನರ್ಜನ್ಮಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಖಲ್ಖಾ ಜೆಟ್ಸುನ್ ದಂಪಾ ಅವರು ಟಿಬೆಟಿಯನ್ ಬೌದ್ಧಧರ್ಮದ ಪ್ರಮುಖ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
1995 ರಲ್ಲಿ, ದಲೈಲಾಮಾ ಅವರು 11ನೇ ಪಂಚೆಮ್ ಲಾಮಾ ಎಂದು ಹೆಸರಿಸಿದಾಗ, ಚೀನಾದ ಅಧಿಕಾರಿಗಳು ಪಂಚೆಮ್‌ನನ್ನು ಮತ್ತು ಅವರ ಕುಟುಂಬವನ್ನು ಅಪಹರಿಸಿದ್ದರು. ಇದರ ನಂತರ ಆ ಕುಟುಂಬ ಕಣ್ಮರೆಯಾಗಿತ್ತು. ಇದೀಗ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕನಾಗಿ ಘೋಷಣೆ ಮಾಡಲಾಗಿದ್ದು, ಇದೀಗ ಬಾಲಕನ ಭದ್ರತೆ ಕುರಿತು ಕಳವಳಗಳು ಮೂಡತೊಡಗಿವೆ. ಪಂಚೆಮ್ ಅವರನ್ನು ದೀಕ್ಷೆಯ ಒಂದು ತಿಂಗಳ ನಂತರ ಅಪರಹರಿಸಿದ್ದರು. ಕಳೆದ 27 ವರ್ಷಗಳಿಂದಲೂ ಇವರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.