ಸಿದ್ದಾಪುರ: ರೈತರಿಗೆ ಹಾಗೂ ಸ್ಥಳೀಯರಿಗೆ ಸ್ಥಳೀಯವಾಗಿ ಅವಶ್ಯಕವಿರುವ ಸಸ್ಯಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ನಿರ್ಮಾಣವಾದ ನರ್ಸರಿಗೆ ಹದಿನಾರನೇ ಮೈಲಿಗಲ್ಲು ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಭೇಟಿ ನೀಡಿ ನರ್ಸರಿ ಕುರಿತಾದ ಮಾಹಿತಿ ಪಡೆದು ಖುಷಿಪಟ್ಟರು.
ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ನರ್ಸರಿಗೆ ಮಕ್ಕಳನ್ನು ಕರೆತಂದು ನರ್ಸರಿ ಕೈಗೊಳ್ಳುವ ಮೂಲ ಉದ್ದೇಶ ಹಾಗೂ ಇದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು. ವಿವಿಧ ಜಾತಿಯ ಗಿಡಗಳನ್ನು ಬೆಳೆಸುವಾಗ ಕೈಗೊಳ್ಳಬೇಕಾದ ಕ್ರಮಗಳೇನು, ಸಸಿಗಳ ಆರೈಕೆ, ಬೆಳವಣಿಗೆ ಕ್ರಮ, ಸಂರಕ್ಷಣೆ, ಹಾಗೂ ಅವುಗಳ ಸುರಕ್ಷತೆಯ ಕುರಿತು ಎನ್‌ಆರ್‌ಎಲ್ ಎಮ್ ಸಂಯೋಜಕರಾದ ಮಾಲತಿ ನಾಯ್ಕ ಹಾಗೂ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾಹಿತಿ ನೀಡಿದರು.
ಇನ್ನು ಈ ನರ್ಸರಿಯಲ್ಲಿ ಆರೈಕೆ ಮಾಡಲಾದ ಸಸಿಗಳನ್ನು ರೈತರು, ಹಾಗೂ ಸ್ಥಳೀಯರಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಸ್ಥಳಿಯವಾಗಿಯೇ ಲಭ್ಯವಾಗುವಂತೆ ನೋಡಿಕೊಳ್ಳುವುದು ಮೂಲ ಉದ್ದೇಶವಾಗಿದೆ ಎಂಬುದನ್ನು ಮಕ್ಕಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ, ಶಾಲಾ ಮುಖ್ಯ ಶಿಕ್ಷಕರಾದ ಗಾಯತ್ರಿ ಅಂಬಿಗ, ಸಹ ಶಿಕ್ಷಕಿ ದೀಪಾ ನಾಯ್ಕ ಹಾಗೂ ನರ್ಸರಿಯಲ್ಲಿ ಕಾರ್ಯ ನಿರ್ವಹಿಸುವ ಸ್ವ ಸಹಾಯ ಸಂಘದ ಮಹಿಳೆಯರು ಹಾಜರಿದ್ದರು.