ದಾಂಡೇಲಿ: ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸ್ನೇಹ ಸಂಗಮ ಕಾಯಕ್ರಮವು ನಗರದ ಜೆ.ಎನ್.ರಸ್ತೆಯಲ್ಲಿರುವ ಕನ್ವೇಷನ್ ಸಭಾಭವನದಲ್ಲಿ ಜರುಗಿತು.
ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ತಾಲ್ಲೂಕು ವೈದ್ಯಾಧಿಕಾರಿಯಾಗಿರುವ ಡಾ.ಅನಿಲ್‌ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಇದೇ ಪ್ರಪ್ರಥಮ ಬಾರಿಗೆ ನಡೆದ ಈ ಕರ‍್ಯಕ್ರಮ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಜಿಲ್ಲಾ ವೈದ್ಯಾಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸಿ ಇದೇ ಮಾ.31ರಂದು ನಿವೃತ್ತರಾಗುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶರದ್ ನಾಯಕ ಅವರನ್ನು ಅವರ ಪತ್ನಿ ಸಮೇತರಾಗಿ ಸನ್ಮಾನಿಸಿ, ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ, ಈ ಜಿಲ್ಲೆಯ ಜನತೆ ನೀಡಿದ ಪ್ರೀತಿ, ಸಹಕಾರ ಹಾಗೂ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ನೀಡಿದ ಸಹಕಾರದಿಂದ ಯಶಸ್ವಿಯಾಗಿ ಕರ‍್ಯನಿರ್ವಹಿಸಲು ಸಾಧ್ಯವಾಯ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೀವದ ಹಂಗು ತೊರೆದು ಕೆಲಸ ಮಾಡಿರುವುದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಪರಿಪೂರ್ಣವಾದ ಸೇವೆ ಪರಿಶುದ್ಧವಾದ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ಅಂತಹ ಸೇವೆ ಆರೋಗ್ಯ ಇಲಾಖೆಯಿಂದ ನಿರಂತರವಾಗಿ ತಮ್ಮೆಲ್ಲರ ಮೂಲಕ ನಡೆಯುವಂತಾಗಲೆಂದು ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ, ಅವರು ನಾವು ಪ್ರತಿದಿನ ಇನ್ನೊಬ್ಬರ ಆರೋಗ್ಯ ಸಂರಕ್ಷಣೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ಕೆಲಸದ ಜೊತೆ ಜೊತೆಗೆ ನಮ್ಮೊಳಗೆ ಕಷ್ಟ ಸುಖಗಳು ಪರಸ್ಪರ ಹಂಚಿಕೆಯಾಗಬೇಕು ಮತ್ತು ನಮ್ಮೊಳಗೆ ಪರಸ್ಪರ ಸಔಹಾರ್ದತೆಯ ಬಾಂದವ್ಯ ನಿರ್ಮಾಣವಾಗಬೇಕೆಂದು ಉದ್ದೇಶದಿಂದ ಈ ಕಾರ‍್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ನಮ್ಮ ಜವಾಬ್ದಾರಿಗಳು ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸುವ ಮೂಲಕ ಇಲಾಖೆಯ ಕೆಲಸ ಕಾರ‍್ಯಗಳ ಜೊತೆಗೆ ಸಾಮಾಜಿಕ ಬದ್ಧತೆಯನ್ನು ತೋರೋಣ ಎಂದು ಕರೆ ನೀಡಿದರು. ನಮೆಗೆಲ್ಲಾ ಹಿರಿಯಣ್ಣನಂತೆ ಸದಾ ಮಾರ್ಗದರ್ಶನ ನೀಡಿ ನಮ್ಮನ್ನು ಪ್ರೋತ್ಸಾಹಿಸದ ಡಾ.ಶರದ್ ನಾಯಕ ಅವರ ನಿವೃತ್ತ ಜೀವನವು ಸುಖಕರವಾಗಿರಲೆಂದು ಶುಭವನ್ನು ಕೋರಿದರು.
ಹಳಿಯಾಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಮೇಶ್ ಕದಂ ಅವರು ಮಾತನಾಡಿ ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಉತ್ತಮವಾದ ಬಾಂಧವ್ಯವಿರಬೇಕು. ಅಂತಹ ಬಾಂಧವ್ಯವಿದ್ದಾಗ ಮಾತ್ರ ಕೆಲಸ ಕಾರ‍್ಯಗಳು ಸುಲಲಿತವಾಗಿ ನಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ದಾಂಡೇಲಿ ಸಾರ್ವಜನಿಕ ಆಸ್ಪತ್ರೆ, ಹಳಿಯಾಳ ತಾಲೂಕು ಆಸ್ಪತ್ರೆ, ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು. ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಆರೋಗ್ಯಪೂರ್ಣ ವಾತವರಣ ನಿರ್ಮಾಣಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಿ ಮೂಡಿ ಬಂದಿದ್ದು ವಿಶೇಷವಾಗಿತ್ತು.