Slide
Slide
Slide
previous arrow
next arrow

ಮೆಚ್ಚುಗೆ ಗಳಿಸಿದ ಗೋಡೆ ನಾರಾಯಣ ಹೆಗಡೆ ಭೀಷ್ಮನ ಪಾತ್ರ

300x250 AD

ಸಿದ್ದಾಪುರ: ಹಿರಿಯ ಯಕ್ಷಗಾನ ಕಲಾವಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಗೋಡೆ ನಾರಾಯಣ ಹೆಗಡೆ ಅವರು ತಮ್ಮ 84ನೇ ವಯಸ್ಸಿನಲ್ಲಿ ಕಿರಿಯ ಯಕ್ಷಗಾನ ಕಲಾವಿದರೂ ನಾಚುವಂತೆ ತಮ್ಮ ಎಂದಿನ ಶೈಲಿಯಲ್ಲಿ ಭೀಷ್ಮನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಕಲಾಸಕ್ತರ ಕರತಾಡನದ ಮೂಲಕ ಮೆಚ್ಚುಗೆ ಗಳಿಸಿದರು.
ತಾಲೂಕಿನ ಹಾರ್ಸಿಕಟ್ಟಾದಲ್ಲಿ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಹಾಗೂ ಸರಸ್ವತಿ ಕಲಾ ಟ್ರಸ್ಟ್  ಹೊಸಗದ್ದೆ  ಇವರ ಸಂಯೋಜನೆಯಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟ್ ಇವರ ಸಹಕಾರದೊಂದಿಗೆ ಶುಕ್ರವಾರ ಆಯೋಜಸಿದ್ದ ಭೀಷ್ಮ ಪರ್ವ  ಯಕ್ಷಗಾನದಲ್ಲಿ ಭೀಷ್ಮನ ಪಾತ್ರವನ್ನು ನೃತ್ಯ, ಮಾತು, ರಂಗ ನಡೆ, ಹಾವ- ಭಾವದ ಮೂಲಕ ಗಮನ ಸೆಳೆದು ಅಭಿಮಾನಿಗಳ ಮನತಣಿಸಿದ್ದಲ್ಲದೇ ಅವರು ಹುಬ್ಬೇರಿಸುವಂತೆ ಮಾಡಿದರು.
ಕೃಷ್ಣನಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ಭಟ್ಟ ಸಿದ್ದಾಪುರ, ಅರ್ಜುನನಾಗಿ ಪ್ರಭಾಕರ ಹೆಗಡೆ ಹಣಜೀಬೈಲ್, ಕೌರವನಾಗಿ ನಿರಂಜನ ಜಾಗ್ನಳ್ಳಿ, ಕರ್ಣನಾಗಿ ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ, ಅಭಿಮನ್ಯುವಾಗಿ ಕು.ಭೂಮಿಕಾ ಹೆಗಡೆ ಹೊಸಗದ್ದೆ ಇವರು ಉತ್ತಮವಾಗಿ ಅಭಿನಯಿಸಿದರು.
ಇದಕ್ಕೆ ಪೂರಕವಾದ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ಶಂಕರ ಭಾಗ್ವತ್ ಯಲ್ಲಾಪುರ, ರಘುಪತಿ ಹೆಗಡೆ ಹೂಡೇಹದ್ದ ಸಾತ್ವಿಕ್ ಜೋಶಿ ಸೋಂದಾ ಸಹಕರಿಸಿದರು.

ಗೌರವ ಸಮರ್ಪಣೆ:
ಕಾರ್ಯಕ್ರಮದ ಪೂರ್ವದಲ್ಲಿ ಗೋಡೆ ನಾರಾಯಣ ಹೆಗಡೆ ಹಾಗೂ ಅಶೋಕ ಭಟ್ಟ ಸಿದ್ದಾಪುರ ಇವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಗೌರವವನ್ನು ಸ್ವೀಕರಿಸಿ ಮಾತನಾಡಿದ ಗೋಡೆ ನಾರಾಯಣ ಹೆಗಡೆ ಅವರು ಹಾರ್ಸಿಕಟ್ಟಾ  ಭಾಗದ ಜನರ ಆತ್ಮೀಯತೆ ಎನ್ನುವ ಭಾವ ಪಾಶ ಪುನಃ ನನ್ನನ್ನು ರಂಗಕ್ಕೇರುವಂತೆ ಮಾಡಿತು. ಅಭಿಮಾನಿಗಳ ಪ್ರೀತಿಗೆ ಮನಸೋತು ವೇಷ ಮಾಡಿದ್ದೇನೆ. ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆಯಾಗಿದ್ದು, ಇದು ನಿರಂತರವಾಗಿ ಪ್ರದರ್ಶನಗೊಳ್ಳುವಂತಾಗಬೇಕು ಎಂದರು.
ಉದ್ಯಮಿ ಉಪೇಂದ್ರ ಪೈ ಶಿರಸಿ ಮಾತನಾಡಿ ಯಕ್ಷಗಾನ ಕಲೆ ಶ್ರೇಷ್ಠವಾಗಿದೆ. ಹಾರ್ಸಿಕಟ್ಟಾ ಮೊದಲಿನಿಂದಲೂ ಯಕ್ಷಗಾನ ಕೆಲ ಹಾಗೂ ಕಲೆವಿದರನ್ನು ಪ್ರೋತ್ಸಾಹಸುತ್ತ ಬಂದಿದೆ. ಅಲ್ಲದೇ ಯಕ್ಷಗಾನ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ. ಉಪೇಂದ್ರ ಫೈ ಸೇವಾ ಟ್ರಸ್ಟ್ ನಿಂದ ಈ ವರ್ಷ 20 ಯಕ್ಷಗಾನ ಪ್ರದರ್ಶನ ಮಾಡುವ ಉದ್ದೇಶ ಹೊಂದಿದ್ದು ಈಗ ಅದು 21ಕ್ಕೆ ಏರಿಕೆ ಆಗಿದೆ. ಮುಂದಿನ ವರ್ಷ 40 ಯಕ್ಷಗಾನ ಪ್ರದರ್ಶನಕ್ಕೆ ಆರ್ಥಿಕ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ದಿವಾನ್ ಯಕ್ಷಸಮೂಹದ ಅಧ್ಯಕ್ಷ ಪಿ.ವಿ.ಹೆಗಡೆ ಹೊಸಗದ್ದೆ, ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ಅನಂತ ಶಾನಭಾಗ ಹಾರ್ಸಿಕಟ್ಟಾ ಉಪಸ್ಥಿತರಿದ್ದರು. ದಿವಾನ್ ಯಕ್ಷಸಮೂಹದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top