ಕುಮಟಾ: ಪಟ್ಟಣದ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 2022- 23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಶುಭಾಶೀರ್ವದಿಸಿ ಬೀಳ್ಕೊಡಲಾಯಿತು.
ಪಟ್ಟಣದ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಿವೃತ್ತ ಮುಖ್ಯಾಧ್ಯಾಪಕ ಜಿ.ಎಸ್.ಭಟ್, ಎನ್.ಆರ್.ಗಜು, ಮುರಳೀಧರ ಪ್ರಭು ಹಾಗೂ ಸಂಸ್ಥೆಯ ಉಪಾಧ್ಯಕ್ಷ ಮೋಹನ ಶಾನಭಾಗ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವಂತೆ ತಿಳಿಸುವ ಜೊತೆಗೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಪಾಂಡುರಂಗ ಶೇಟ್ ವಾಗ್ರೇಕರ್ ಮಾತನಾಡಿ, ನಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಅಂಕ ಗಳಿಸುವ ಮೂಲಕ ಶಾಲೆಗೆ, ಈ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಗಣಿತ ಶಿಕ್ಷಕ ಅನಿಲ್ ರೋಡ್ರಗೀಸರ ಸ್ವಾಗತ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳ ಫಲಿತಾಂಶ ವಿಶ್ಲೇಷಣೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶ್ರೇಯಾಂಕಿತ 10 ವಿದ್ಯಾರ್ಥಿಗಳನ್ನು ಹಾಗೂ ಭರ್ಜಿ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಭರತ್ ಈಶ್ವರ್ ಅಂಬಿಗನನ್ನು ಸನ್ಮಾನಿಸಲಾಯಿತು. ಶಾಲಾ ಸತ್ಸಂಪ್ರದಾಯದಂತೆ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿ, ಶಾಲೆಯ ಎರಡು ವರ್ಗ ಕೋಣೆಗಳನ್ನು ಡಿಜಿಟಲ್ ಕ್ಲಾಸ್ ರೂಮ್ ಗಳನ್ನಾಗಿಸುವ ಆಂಡ್ರಾಯ್ಡ್ ಟಿವಿಗಳನ್ನು ಕೊಡಮಾಡಿದರು. ಸರ್ವ ವಿದ್ಯಾರ್ಥಿಗಳ ಪರವಾಗಿ ನೇಹಾ, ಭೂಮಿಕಾ, ನಂದನ, ಶ್ರೇಯಸ್ ಶಾಲಾ ಜೀವನದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಿಕ್ಷಕ ವೃಂದದ ಪರವಾಗಿ ಶಿಕ್ಷಕ ವಿಷ್ಣು ಭಟ್, ಶಿಕ್ಷಕಿ ಕೆ.ಎಸ್.ಅನ್ನಪೂರ್ಣ ಹಿತೋಕ್ತಿಯನ್ನು ಬೋಧಿಸಿದರು. ವಿದ್ಯಾರ್ಥಿಗಳ ಅಚ್ಚುಕಟ್ಟಾದ ಕೇಶ, ವಸ್ತ್ರ ವಿನ್ಯಾಸ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು. ಸರ್ವ ಶಿಕ್ಷಕ ಶಿಕ್ಷಕೇತರವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.