• Slide
    Slide
    Slide
    previous arrow
    next arrow
  • ಜಲ ಮೂಲಗಳ ಸಂರಕ್ಷಣೆಗೆ ಶ್ರೀನಿವಾಸ್ ಹೆಬ್ಬಾರ್ ಕೊಡುಗೆ ಅಪಾರ: ಹರಿಪ್ರಕಾಶ ಕೋಣೆಮನೆ

    300x250 AD

    ಶಿರಸಿ: ‘ಮನುಷ್ಯನಿಗೆ ಹಣ-ಅಧಿಕಾರ ಪ್ರಧಾನವಾದಾಗ ಬೇರೇನೂ ಕಾಣುವುದಿಲ್ಲ, ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಹಣ, ಅಧಿಕಾರ ಎಲ್ಲವೂ ಬರುತ್ತದೆ. ವಿಶ್ವಾಸ, ಒಡನಾಟ, ಪ್ರೀತಿ ಉದಾತ್ತವಾದ ಆಲೋಚನೆ ಬೇಕು, ಮನಸ್ಸಿದ್ದರೆ ಮಾರ್ಗ ಇದೆ ಅನ್ನುವುದಕ್ಕೆ ಉದ್ಯಮಿ ಶ್ರೀನಿವಾಸ್ ಹೆಬ್ಬಾರ್  ಅವರೇ ಒಂದು ಉದಾಹರಣೆ’ ಎಂದು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಪಟ್ಟರು.

    ಶಿರಸಿ ಜೀವಜಲ ಕಾರ್ಯಪಡೆ ವತಿಯಿಂದ ಮಾ.25, ಶನಿವಾರ ಆಯೋಜಿಸಲಾಗಿದ್ದ ತಾಲೂಕಿನ ಕರಸುಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    “ಶಿರಸಿ ತಾಲೂಕಿನಲ್ಲಿರುವ ಕೆರೆಗಳು ಜೀವಂತವಾಗಿವೆ ಎಂದರೆ ಅದಕ್ಕೆ ಕಾರಣ ಶ್ರೀನಿವಾಸ ಹೆಬ್ಬಾರ್ ಅವರೇ ಹೊರತು ಸರ್ಕಾರವಲ್ಲ, ಸರ್ಕಾರ ಅತೀ ಹೆಚ್ಚು ಹಣವನ್ನು ನೀರಾವರಿಗೆ ವ್ಯಯ ಮಾಡುತ್ತಿದೆ. ಎತ್ತಿನ ಹೊಳೆ ಯೋಜನೆಯಿಂದ ಹನಿ ನೀರು ಬಾರದಿದ್ದರೂ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಕಾಮಗಾರಿ ನಡೆಸುತ್ತಿದೆ. ಆದರೆ ಶ್ರೀನಿವಾಸ ಹೆಬ್ಬಾರ್ ಸ್ವತಃ ಸಾಕಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಲಮೂಲಗಳ ಸಂರಕ್ಷಣೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲ ಮೂಲಗಳ ಸಂರಕ್ಷಣೆ ಮಾಡುವುದು ನಮಗೆ ಅನಿವಾರ್ಯವಾಗುತ್ತಿದೆ. ಜಲ ಮೂಲಗಳ ಸಂರಕ್ಷಣೆಗೆ ಶ್ರೀನಿವಾಸ್ ಹೆಬ್ಬಾರ್ ಕೊಡುಗೆ ಅಪಾರ” ಎಂದು ಶ್ಲಾಘಿಸಿದರು.

    ಶಿರಸಿ ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶ್ರೀನಿವಾಸ್ ಹೆಬ್ಬಾರ್ ಅವರ ಚುನಾವಣೆ ಸ್ಪರ್ಧೆಯ ವಿಚಾರ ಸ್ಪಷ್ಟಪಡಿಸಿದ ಹರಿಪ್ರಕಾಶ್ ಕೋಣೆಮನೆ, “ಹೆಬ್ಬಾರ್ ಅವರು ಚುನಾವಣೆಗೆ ಸ್ಪರ್ಧಿಸಲು ತಯಾರಿಲ್ಲ. ಬಹಳ ಒತ್ತಡ ಬಂದರೂ ಒಪ್ಪದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆರೆಯೆಂದರೆ ಒಂದು ಊರಿನ ಇತಿಹಾಸವಾಗಿರುತ್ತದೆ. ಅಧಿಕಾರವನ್ನು ಬೆನ್ನತ್ತಿ ಹೋಗುವವರ ಹಿಂದೆ ಹೋಗುವ ಬದಲು ಸಾಮಾಜಿಕ ಕೆಲಸ ಮಾಡುವವರ ಹಿಂದೆ ಹೋಗಬೇಕು” ಎಂದರು.
    ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ “ಯುಗಾದಿಯಂದು ನಮ್ಮ ಜೀವಜಲ ಕಾರ್ಯಪಡೆಗೆ ಆರು ವರ್ಷಗಳು ತುಂಬಿವೆ. ಈ ಮೊದಲು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡುತ್ತಿದ್ದೆವು. ಶಿರಸಿಯ ಸುತ್ತಮುತ್ತ ಇರುವ ಬಹುತೇಕ ಎಲ್ಲ ಕೆರೆಗಳನ್ನು ಜೀವಜಲ ಕಾರ್ಯಪಡೆ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಅತಿಕ್ರಮಣ ಮಾಡಿಕೊಂಡ ಕೆರೆಯ ಜಾಗವನ್ನು ಬಿಡಿಸಿ ಅಭಿವೃದ್ಧಿ ಮಾಡಿದ್ದೇವೆ. ಆಹಾರವಿಲ್ಲ ಎಂದರೂ ಬದುಕಬಹುದು, ಆದರೆ ನೀರು ಇಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ. ಇದೀಗ ಎಂಟು ದಿಕ್ಕುಗಳಲ್ಲಿ 16 ಕೆರೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಕೆರೆಗಳ ಅಭಿವೃದ್ಧಿ ಮಾಡುವುದರಿಂದ ಜಲಮೂಲಗಳ ಅಭಿವೃದ್ಧಿಯಾಗುತ್ತದೆ. ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ. ಇದುವರೆಗೂ ಯಾವ ಸರ್ಕಾರದಿಂದಲೂ ಒಂದೇ ಒಂದು ರೂಪಾಯಿಯನ್ನು ತೆಗೆದುಕೊಂಡಿಲ್ಲ. ಮುಂದೆಯೂ ತೆಗೆದುಕೊಳ್ಳುವುದಿಲ್ಲ. ನಮ್ಮ ಕೆಲಸಕ್ಕೆ ಸಹಕಾರ, ಬೆಂಬಲ ನೀಡಿ’ ಎಂದರು.

    300x250 AD

    ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಸ್ಥ ಗಿರೀಶ್ ಭಟ್, “ಹಾಳುಬಿದ್ದ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಬಹಳ ವರ್ಷಗಳಿಂದ ಊರಿನವರು ತೀರ್ಮಾನಿಸಿದ್ದೆವು. ಈ ಕೆರೆ ಕುಡಿಯುವ ನೀರಿನ ಕೆರೆ ಎಂದು ನಮಗೆ ತಿಳಿದು ಬಂತು. ಸುಮಾರು 2.5 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ಶ್ರೀನಿವಾಸ ಹೆಬ್ಬಾರ್ ಅವರು ಮುಂದೆ ಬಂದಿರುವುದು ಸಂತಸದ ಸಂಗತಿ” ಎಂದರು.

    ಈ ಸಂದರ್ಭದಲ್ಲಿ ಕಿರಣ್ ಚಿತ್ರಕಾರ, ಡಿ.ಆರ್. ಭಟ್, ಪಂಚಾಯತಿ ಉಪಾಧ್ಯಕ್ಷ ರವೀಶ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಿ.ಪಿ. ಹೆಗಡೆ ವೈಶಾಲಿ, ಪ್ರದೀಪ ಶೆಟ್ಟಿ, ಸಂತೋಷ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top