ದಾಂಡೇಲಿ: ನಗರದ ಗಾಂಧಿನಗರದಲ್ಲಿರುವ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವು ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿತು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಆಜಾದ್ ನಗರದ ಶ್ರೀಬಸವೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು. ಪೂಜಾ ಕಾರ‍್ಯಕ್ರಮದ ಮೊದಲಿಗೆ ದೇವಿಯ ವಿಶೇಷ ಅಲಂಕಾರ ಪೂಜಾ ಕಾರ‍್ಯಕ್ರಮ ಜರುಗಿತು. ಇದಾದ ಬಳಿಕ ಪಲ್ಲಕಿ ಉತ್ಸವವು ಜರುಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಶ್ರೀದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು.
ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನಂತರ ಮುತೈದೆಯರಿಗೆ ಅರಿಷಿಣ, ಕುಂಕುಮ ಹಾಗೂ ಉಡಿ ತುಂಬುವ ಕಾರ‍್ಯಕ್ರಮ ಜರುಗಿತು. ಮಧ್ಯಾಹ್ನ 12.30 ಗಂಟೆಗೆ ಬೇವು ಬೆಲ್ಲ ಪ್ರಸಾದ ವಿತರಿಸಲಾಯಿತು. ಮಹಾಪೂಜೆಯಾದ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಪೂಜಾ ಕಾರ್ಯಕ್ರಮದಲ್ಲಿ ಮತ್ತು ಅನ್ನಸಂತರ್ಪಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ, ಶ್ರೀದೇವರ ಕೃಪೆಗೆ ಪಾತ್ರರಾದರು. ಜಾತ್ರೋತ್ಸವದ ಯಶಸ್ಸಿಗೆ ಶ್ರೀಆದಿಶಕ್ತಿ ದುರ್ಗಾದೇವಿ ದೇವಸ್ಥಾನ ಅಭಿವೃದ್ಧಿ ಕಮಿಟಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಶ್ರಮಿಸಿದ್ದರು. ಜಾತ್ರೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು, ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಗಾಂಧಿನಗರದಲ್ಲಿ ಈ ಜಾತ್ರೋತ್ಸವ ಹಬ್ಬದ ವಾತವರಣವನ್ನು ಸೃಷ್ಟಿಸಿತ್ತು.