ಕಾರವಾರ: ನಗರದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದ ಆಸ್ಪತ್ರೆ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಸುಮಾರು 17 ಕೋಟಿ ವೆಚ್ಚದಲ್ಲಿ 50 ಹಾಸಿಗೆಯ ತೀವ್ರ ನಿಗಾ ಘಟಕದ ಕಟ್ಟಡಕ್ಕೆ ಶುಕ್ರವಾರ ಶಾಸಕಿ ರೂಪಾಲಿ ನಾಯ್ಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಇಲ್ಲದ ಕಾರಣ ಅಪಘಾತದಂತಹ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಆಸ್ಪತ್ರೆ ಆವರಣದಲ್ಲಿ ಸುಮಾರು 160 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು ಇದರೊಟ್ಟಿಗೆ ಸರ್ಕಾರ 17 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿದೆ. ನಗರದ ಜಿಲ್ಲಾ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಿ, ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕಿ ರೂಪಾಲಿ ನಾಯ್ಕ ನಿರಂತರ ಪ್ರಯತ್ನ ನಡೆಸಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದು ಶುಕ್ರವಾರ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆಯನ್ನ ರೂಪಾಲಿ ನಾಯ್ಕ ನೆರವೇರಿಸಿದರು.
ಇದಾದ ನಂತರ ಮಾತನಾಡಿದ ರೂಪಾಲಿ ನಾಯ್ಕ ನಾನು ಶಾಸಕಿಯಾದ ನಂತರದಿಂದಲೂ ಕಾರವಾರದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಹೆಚ್ಚು ಅನುದಾನ ತರಲು ಪ್ರಯತ್ನ ನಡೆಸುತ್ತಾ ಬಂದಿದ್ದೇನೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ 160 ಕೋಟಿ ಅನುದಾನ ಬಿಡುಗಡೆ ಮಾಡಿ ಕಟ್ಟಡ ಕಾಮಗಾರಿಯು ಅರ್ಧ ಮುಗಿದಿದೆ. ಕ್ರಿಟಿಕಲ್ ಕೇರ್ ಕಟ್ಟಡ ಬೇಕು ಎಂದು ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದು ಶಂಕುಸ್ಥಾಪನೆ ನೆರವೇರಿಸಿದ್ದಕ್ಕೆ ಖುಷಿ ಸಿಕ್ಕಿದೆ ಎಂದಿದ್ದಾರೆ. ತೀವ್ರ ನಿಗಾ ಘಟಕ ಆಸ್ಪತ್ರೆಯಲ್ಲಿ ಬಹಳ ಉಪಯೋಗಕಾರಿ. ಈ ಹಿಂದೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಸುಮಾರು 16 ಎಕರೆ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಕ್ರಿಟಿಕಲ್ ಆಸ್ಪತ್ರೆ ಮಾಡಲು ಮುಂದಾಗಿದ್ದೆವು. ಆದರೆ ಮೆಡಿಕಲ್ ಕಾಲೇಜಿನ ಆವರಣದಲ್ಲಿಯೇ ಇರಬೇಕಾದ ಹಿನ್ನಲೆಯಲ್ಲಿ 50 ಹಾಸಿಗೆಯ ಕಟ್ಟಡ ಮಾಡಲಾಗುತ್ತಿದೆ.
ಕೊರೋನಾ ಸಂದರ್ಭದಲ್ಲಿ ಜನರು ಕಷ್ಟಪಟ್ಟಿದ್ದನ್ನ ನೋಡಿದ್ದೇನೆ. ಕಾರವಾರದಲ್ಲಿ ಉತ್ತಮ ಆಸ್ಪತ್ರೆ ಇದ್ದರೇ ಈ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು ಈ ಕಟ್ಟಡವನ್ನ ನಿರ್ಲಕ್ಷ್ಯ ಮಾಡದೇ ಬೇಗ ಕಟ್ಟುವ ಮೂಲಕ ಜನರ ಉಪಯೋಗಕ್ಕೆ ಸಿಗುವ ಕಾರ್ಯ ಮಾಡಬೇಕು ಎಂದರು. ನಗರಸಭೆ ಅಧ್ಯಕ್ಷ ಡಾ.ನಿತೀನ್ ಪಿಕಳೆ ಮಾತನಾಡಿ ವೈದ್ಯ ವೃತ್ತಿ ಎಂದರೆ ಸಾಮಾನ್ಯ ವೃತ್ತಿಯಲ್ಲ. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವವನ್ನ ಪಣಕ್ಕೆ ಇಟ್ಟು ದುಡಿದರು. ಕಾರವಾರದ ಆಸ್ಪತ್ರೆಯಲ್ಲಿ ಒಳ್ಳೆಯ ವೈದ್ಯರಿದ್ದು ಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ. ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್, ನಗರಸಭೆ ಸದಸ್ಯೆ ರೇಷ್ಮಾ ಮಾಳ್ಸೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.