ಹೊನ್ನಾವರ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ ಖಂಡಿಸಿದರು.
ಯಶ್ವಸಿಯಾಗಿ ಭಾರತ ಜೋಡೊ ಯಾತ್ರೆಯ ಬಳಿಕ ಕಾಂಗ್ರೆಸ್ ಸಂಘಟಿತವಾಗಿದ್ದು, ಬಿಜೆಪಿಯ ದುರಾಡಳಿತ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ. ಕೊಟ್ಟ ಭರವಸೆ ಈಡೇರಿಸದೇ ಕೋಮು ಭಾವನೆ ದಕ್ಕೆ ತರುವ ಕಾರ್ಯ ಇಷ್ಟು ದಿನ ಬಿಜೆಪಿ ಮಾಡುತ್ತಿತ್ತು. ಇದೀಗ ಮೋದಿಯವರನ್ನು ಟೀಕಿಸಿದ್ದಾರೆ ಎನ್ನುವ ಕಾರಣಕ್ಕೆ ಜನರಿಂದ ಆಯ್ಕೆಗೊಂಡ ಸಂಸದರನ್ನು ಅಮಾನತುಗೊಳಿಸುತ್ತಾರೆ. ಈ ಹಿಂದೆಯು ಹಲವು ಬಾರಿ ಹಲವು ಬಿಜೆಪಿ ಪಕ್ಷದ ನಾಯಕರು ಕೂಡ ಟೀಕಿಸಿದ ಅನೇಕ ಉದಾಹರಣೆಗಳಿವೆ. ನಮ್ಮ ಪಕ್ಷದ ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ, ರಾಜೀವ ಗಾಂಧಿ, ಮನಮೋಹನ ಸಿಂಗ್, ಸೋನಿಯಾ ಗಾಂಧಿ, ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಇವರನ್ನು ಕಟು ಶಬ್ದದಿಂದ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಅವರೆಲ್ಲರನ್ನು ಹೀಗಿಯೇ ಅಮಾನತು ಮಾಡುತ್ತಾ ಹೋದರೆ ಮುಂದೊಂದು ದಿನ ಲೋಕಸಭೆ ಮತ್ತು ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಇವರ ಪಕ್ಷದವರು ಸಂಪೂರ್ಣ ಖಾಲಿಯಾಗಬೇಕಾಗಬಹುದು ಎಂದಿದ್ದಾರೆ.
ಕೋರ್ಟ್ ತೀರ್ಪು ನೀಡಿದ್ದರೂ ಮೇಲ್ಮನವಿಗೆ ಅವಕಾಶವಿದೆ. ತರಾತುರಿಯಲ್ಲಿನ ಈ ನಿರ್ಧಾರ ಖಂಡಿಸುತ್ತಿದ್ದು, ಈ ಬಗ್ಗೆ ಪಕ್ಷದ ತೀರ್ಮಾನದಂತೆ ಜಿಲ್ಲಾ ಕಿಸಾನ್ ಕಾಂಗ್ರೇಸ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.