Slide
Slide
Slide
previous arrow
next arrow

ಸಂಘದ ಕಾರ್ಯಾಲಯ ರಾಷ್ಟ್ರೀಯ ಕಾರ್ಯದ ಪ್ರೇರಣಾ ಕೇಂದ್ರ: ಮಂಗೇಶ ಭೆಂಡೆ

300x250 AD

ಕುಮಟಾ: ಪಟ್ಟಣದ ವಿವೇಕನಗರದ ಸ್ವಾಮೀ ವಿವೇಕಾನಂದ ಉದ್ಯಾನವನ ಸಮೀಪ ನೂತನವಾಗಿ ನಿರ್ಮಿಸಲಾದ ಆರ್‌ಎಸ್‌ಎಸ್‌ನ ಜಿಲ್ಲಾ ಕಾರ್ಯಾಲಯವಾದ ‘ಮಾಧವಕುಂಜ’ವನ್ನು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ ಲೋಕಾರ್ಪಣೆಗೊಳಿಸಿದರು.


ನಂತರ ಮಾತನಾಡಿದ ಅವರು, ಆರ್.ಎಸ್.ಎಸ್ ಸಂಘಟನೆಗೆ ಪ್ರಾರಂಭದಲ್ಲಿ ಕಾರ್ಯಾಲಯ ಇರಲಿಲ್ಲ. ಸರಸಂಘ ಚಾಲಕರ ಮನೆಯನ್ನೇ ಕಾರ್ಯಾಲಯವಾಗಿ ಮಾಡಿಕೊಂಡಿದ್ದರು. ನಂತರ ವ್ಯವಸ್ಥೆಗೆ ಕಾರ್ಯಾಲಯದ ಅವಶ್ಯವನ್ನು ಮನಗಂಡು ಪ್ರತಿ ಜಿಲ್ಲೆಯಲ್ಲಿಯೂ ಕಾರ್ಯಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಷ್ಟ್ರಕಾರ್ಯಕ್ಕಾಗಿ ಕೆಲಸ ಮಾಡಲು ಪ್ರೇರಣಾ ಕೇಂದ್ರವಾಗಿದ್ದು, ಆ ದಿನದಿಂದ ಸಂಘದ ಕಾರ್ಯ ವಿಸ್ತಾರಗೊಂಡು ದೇಶದಲ್ಲಿ 68 ಸಾವಿರ ಗ್ರಾಮವನ್ನು ತಲುಪಿದ್ದು, ಇದರ ಕಾರ್ಯ ಸರ್ವ ವ್ಯಾಪಿಗೊಂಡಿದೆ. ನಿಷ್ಠಾವಂತ ಸ್ವಯಂ ಸೇವಕರ ಪರಿಶ್ರಮ ಮತ್ತು ನಿಷ್ಠೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೆಮ್ಮರವಾಗಿ ಬೆಳೆದಿದೆ. ಜಗತ್ತು ಸಂಘದ ಕಡೆ ನೋಡುತ್ತಿರುವುದಲ್ಲದೇ, ವಿದೇಶಿಗರು ಸಂಘದ ಅಧ್ಯಯನ ನಡೆಸಲು ಮುಂದಾಗಿದ್ದಾರೆ.
ಇನ್ನು ಆರ್.ಎಸ್.ಎಸ್ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ವಿರೋಧಿಯಲ್ಲ. ಹಿಂದೂ ಸಮಾಜದಲ್ಲಿ ಕೊಳಕನ್ನು ತೆಗೆದು ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲುವಂತೆ ಮಾಡಲು ಸಂಘ ಸ್ಥಾಪನೆಗೊಂಡಿದೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದ ಅವರು, ಮನೆ-ಮನಗಳಲ್ಲಿ ಸಂಘ ಬೆಳೆಯಬೇಕಿದ್ದು, ಸಾಮಾಜಿಕ ಪರಿವರ್ತನೆ ಪ್ರಕ್ರಿಯೆ ಆರಂಭವಾಗಬೇಕು. ಸಮಾಜದಲ್ಲಿ ಸಜ್ಜನರ ಶಕ್ತಿ ಕೊರತೆಯಿಲ್ಲ. ಅವರ ನಿಷ್ಕ್ರಿಯತೆಯಿಂದ ಸಮಾಜಕ್ಕೆ ಘಾತುಕ ಉಂಟಾಗಿದೆ. ಸಜ್ಜನರು ಉತ್ಸಾಹದಿಂದ ಕಾರ್ಯನಿರ್ವಹಿಸಿದರೆ ಪ್ರತಿಯೊಬ್ಬರ ಮನೆಗಳಲ್ಲಿ ಉತ್ತಮ ಸಂಸ್ಕಾರ ರೂಪುಗೊಳ್ಳಲು ಸಾಧ್ಯವಿದೆ. ಸಂಘ ಕಾರ್ಯ ವೇಗ ಪಡೆದುಕೊಳ್ಳಲು ಕಾರವಾರ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಕಾರ್ಯಾಲಯದ ಅವಶ್ಯಕತೆಯನ್ನು ನಮ್ಮ ಹಿರಿಯರು ಹೇಳಿದ್ದರು. ಅವರ ಕನಸು ಇಂದು ನನಸಾಗಿದೆ. ಇದರ ಮೂಲಕ ರಾಷ್ಟ್ರಕಟ್ಟುವ ಕಾರ್ಯ ಪ್ರತಿ ದಿನ ನಡೆಯಬೇಕು ಎಂದರು.

300x250 AD

ಶ್ರೀಕಲ್ಪತರು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹನುಮಂತ ಶಾನಭಾಗ ಪ್ರಾಸ್ತಾವಿಕ ಮಾತನಾಡಿ, ಸಂಘದ ಕಾರ್ಯ 1980 ನಂತರ ವೇಗ ದೊರೆತು ವನವಾಸಿ ಮತ್ತು ಹಿಂದೂ ಸೇವಾ ಪ್ರತಿಷ್ಠಾನದ ಮೂಲಕ ಸಾಮಾಜಿಕ ಸೇವಾ ಕಾರ್ಯವನ್ನು ಆರಂಭಿಸಲಾಯಿತು. ಇಂದು ಸಂಘವು ಸರ್ವಸ್ಪರ್ಶಿ ಮತ್ತು ಸರ್ವ ವ್ಯಾಪಿಯಾಗಿದೆ. ಕಾರವಾರ ಜಿಲ್ಲೆಯಲ್ಲಿ ಇಂದು 300ಕ್ಕೂ ಅಧಿಕ ಶಾಖೆಗಳನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಶ್ರಮ ವಹಿಸಿದ ದಾಸ ಶಾನಭಾಗ ಮತ್ತು ಕಟ್ಟಡ ನಿರ್ಮಾತೃ ಗಣಪತಿ ಆಚಾರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಜನಾರ್ಧನ ಕಾಮತ ಮತ್ತು ಸತ್ಯಭಾಮ ಕಾಮತ್ ಅವರ ಕುಟುಂಬದ ಹೆಸರಿನಲ್ಲಿ ಪುತ್ರ ರಾಮಚಂದ್ರ ಕಾಮತ್ ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನಕ್ಕೆ ಅಂಬ್ಯುಲೆನ್ಸ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸರಸಂಘ ಚಾಲಕ ಅರವಿಂದರಾವ್ ದೇಶಪಾಂಡೆ, ಶಿರಸಿ ವಿಭಾಗ ಸಂಚಾಲಕ ವೆಂಟಕರಮಣ ಹೆಗಡೆ ನಿರ್ನಳ್ಳಿ ಉಪಸ್ಥಿತರಿದ್ದರು. ಸ್ವಯಂ ಸೇವಕ ದರ್ಶನ ಶೇಟ್ ಗೀತೆ ಹಾಡಿದರು. ಶ್ರೀಕಲ್ಪತರು ಸೇವಾ ಪ್ರತಿಷ್ಠಾನದ ಸದಸ್ಯರಾದ ನಿತೀಶ ಅಂಕೋಲೆಕರ ಸ್ವಾಗತಿಸಿದರು. ಆರ್.ಎಸ್.ಎಸ್ ಪ್ರಮುಖ ಅಶ್ವಿನ ಹೆಗಡೆ ನಿರೂಪಿಸಿದರು. ದಯಾನಂದ ಶೇಟ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸುಮಾರು 500 ಕ್ಕೂ ಅಧಿಕ ಜನರು ಪ್ರಸಾದ ಭೋಜನ ಸ್ವೀಕರಿಸಿದರು.

Share This
300x250 AD
300x250 AD
300x250 AD
Back to top