ಕಾರವಾರ: ಭ್ರಷ್ಟಾಚಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜನಶಕ್ತಿ ವೇದಿಕೆಯಿಂದ ಮಾ.28, 29ರಂದು ಕಾರವಾರದಿಂದ ಅಂಕೋಲಾದವರೆಗೆ ಪಕ್ಷಾತೀತವಾಗಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಹೇಳಿದರು.
ಪತ್ರಿಕಾಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಾ.28ರಂದು ಬೆಳಗ್ಗೆ 6.30ಕ್ಕೆ ಇಲ್ಲಿನ ನಗರಸಭೆ ಉದ್ಯಾನದ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ಪ್ರಾರಂಭಿಸಲಿದ್ದೇವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ಹೊರಟು, ಅವರ್ಸಾದಲ್ಲಿ ವಾಸ್ತವ್ಯ ಹೂಡಲಿದ್ದೇವೆ. ಮರುದಿನ ಅವರ್ಸಾದಿಂದ ಗ್ರಾಮೀಣ ಪ್ರದೇಶಗಳಾದ ದಂಡೇಬಾಗ, ಬೊಗ್ರಿಗದ್ದೆ, ಬಾವಿಕೇರಿ, ಬೇಲೆಕೇರಿ ಹಾಗೂ ಕೇಣಿ ಮೂಲಕ ಶಾಂತದುರ್ಗಾ ದೇವಸ್ಥಾನಕ್ಕೆ ತೆರಳಲಿದ್ದೇವೆ. ಮಾರ್ಗದುದ್ದಕ್ಕೂ ಭ್ರಷ್ಟಾಚಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಅಂಕೋಲಾ ನಗರದಲ್ಲಿ ಸಂಚರಿಸುವ ಪಾದಯಾತ್ರೆಯಲ್ಲಿ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗಿಯಾಗಲಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ ಹಾಗೂ ಸುಕ್ರಿ ಗೌಡ ಅವರು ಕೂಡ ಪಾಲ್ಗೊಳ್ಳಲಿದ್ದು, ಅಲ್ಲಿನ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ರಾಮಾ ನಾಯ್ಕ, ಪ್ರಮುಖರಾದ ರಾಜೇಂದ್ರ ಅಂಚೇಕರ, ಬಾಬು ಶೇಖ್, ಮಹಮದ್ ಅಲ್ತಾಫ್, ಕೇರುನಿಸಾ ಬೇಗಂ, ವಿನಯ ನಾಯ್ಕ, ಅಜಯ ಸಿಗ್ಲಿ, ಸೂರಜ ಕೂರ್ಮಕರ ಹಾಗೂ ಶ್ವೇತಾ ನಾಯ್ಕ ಇದ್ದರು.