ಯಲ್ಲಾಪುರ: ಎಷ್ಟೇ ವಿರೋಧ- ಅಡ್ಡಿ ಇದ್ದರೂ ಬಡವರಿಗೆ ಸೌಲಭ್ಯ ನೀಡಲು ಬದ್ಧ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದಲ್ಲಿ ನೂತನ ಕಾರ್ಮಿಕ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ವಿರೋಧಿಗಳಿಗೆ ಟೀಕಿಸಲು ವಿಷಯ ಇಲ್ಲ. ನಾವು ಮಾಡಿದ ಅಭಿವೃದ್ಧಿ ಕೆಲಸ ನೋಡಿ ಸಹಿಸಲಾಗದೆ ಟೀಕೆ ಮಾಡುತ್ತಿದ್ದಾರೆ ಎಂದರು. ಕಾರ್ಮಿಕ ಇಲಾಖೆ ಈ ಮೊದಲು ಕಾರ್ಮಿಕರಿಗೆ ಗಗನಚುಂಬಿ ಆಗಿತ್ತು. ನಾನು ಅಧಿಕಾರ ಸ್ವೀಕರಿಸಿದ ನಂತರ ಅಮೂಲಾಗ್ರ ಬದಲಾವಣೆ ಆಗಿದೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಬ್ಬಾರರ ಅವಧಿಯಲ್ಲಿ ಯಲ್ಲಾಪುರ ವಿಶೇಷವಾದ ಅಭಿವೃದ್ಧಿ ಕಾಣುತ್ತಿದೆ. ಸಚಿವರು ಈ ದಿನ 75 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದರು. ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಮಾತನಾಡಿ, `ಹೆಬ್ಬಾರರು ಯಲ್ಲಾಪುರದ ಅನೇಕ ಕೊರತೆ ಹೋಗಲಾಡಿಸಿದ್ದಾರೆ. ಯಲ್ಲಾಪುರವನ್ನು ಎಲ್ಲ ಇರುವ ಪುರ ಮಾಡಿದ್ದಾರೆ ಎಂದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಪಟ್ಟಣದಲ್ಲಿ 75 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳಿ ಚಾಲನೆ ನೀಡಲಾಯಿತು. ಹಲ್ಸಖಂಡ ರಸ್ತೆ, ನಾರಾಯಣಪುರ ರಸ್ತೆ, ಬಿಲ್ಲಿಗದ್ದೆ ರಸ್ತೆ, ರಾಮಾಪುರ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನಡೆಯಿತು. ಕಾರ್ಮಿಕ ಇಲಾಖೆಯ ಕಟ್ಟಡ, ತಾಲ್ಲೂಕು ಆಡಳಿತ ಸೌಧ, ಯಲ್ಲಾಪುರ ಪಟ್ಟಣ ಪಂಚಾಯ್ತಿ ನೂತನ ಕಟ್ಟಡ, ಕೊಳಗೇರಿ ನಿರ್ಮೂಲನ ಮಂಡಳಿಯಿಂದ ನಿರ್ಮಾಣಗೊಂಡ ಜಿ+2 ಮಾದರಿ ಮನೆಯನ್ನು ಸಚಿವರು ಉದ್ಘಾಟಿಸಿದರು.
ಪ್ರಮುಖರಾದ ಸ್ವಾತಿ, ವಿಜಯ ಮಿರಾಶಿ, ಆರ್ ಎಸ್ ಭಟ್ಟ, ಗೋಪಾಲಕೃಷ್ಣ ಗಾಂವ್ಕರ, ಶಿರೀಶ ಪ್ರಭು, ಮುರಲಿ ಹೆಗಡೆ, ಚಂದ್ರಕಾಂತ ಮರಾಠೆ, ಗಣಪತಿ ಇದ್ದರು.