ದಾಂಡೇಲಿ: ಸ್ಥಳೀಯ ಜನತೆಗೆ ಸಿಂಹಸ್ವಪ್ನವಾಗಿದ್ದ ಕೋತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬುಧವಾರ ಅಂಬೇವಾಡಿಯಲ್ಲಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಅಂಬೇವಾಡಿಯಲ್ಲಿ ಇತ್ತೀಚಿನ ಕೆಲ ತಿಂಗಳುಗಳಿಂದ ಶ್ರೀಯೋಗ್ ಇನ್ ರೆಸಾರ್ಟಿನಲ್ಲಿ ಹಾಗೂ ಸುತ್ತಮುತ್ತಲಿನ ಜನತೆಗೆ ತೀವ್ರ ಉಪಟಳ ನೀಡುತ್ತಿದ್ದ ಕೋತಿಯಿಂದ ಸ್ಥಳೀಯ ಜನ ರೋಸಿ ಹೋಗಿದ್ದರು. ಬಾಗಿಲು ತೆರೆದಿದ್ದ ಪಕ್ಷದಲ್ಲಿ ಮನೆಯೊಳಗಡೆ ಬಂದು ಕಾಟ ನೀಡುವಷ್ಟು ಮಿತಿಮೀರಿದ್ದ ಕೋತಿಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಟ್ ಅವರ ಮಾರ್ಗದರ್ಶನದಡಿ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿಗಳಾದ ಸಂದೀಪ್ ಗೌಡ, ಶಂಕರ್, ರಫೀಕ್ ಮೊದಲಾದವರ ತಂಡ ಕೋತಿಯನ್ನು ಯಶಸ್ವಿಯಾಗಿ ಸೆರೆ ಹಿಡಿದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.