ಯಲ್ಲಾಪುರ: ಭಾರತದ ಅಭಿವೃದ್ಧಿಗೆ ಸೈನಿಕರು, ರೈತರ ಜೊತೆ ಕಾರ್ಮಿಕರು ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಎಪಿಎಂಸಿ ಆವರಣದಲ್ಲಿ ನಡೆದ ಜಿಲ್ಲಾ ಬಿಜೆಪಿಯ ಎಸ್‌ಟಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕ ಸಚಿವನಾಗಿ ನಾನು ಇಡೀ ಇಲಾಖೆಗೆ ಹೊಸ ಆಯಾಮ ನೀಡಿದ್ದೇನೆ. ಕಾರ್ಮಿಕರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರು ಆರ್ಥಿಕವಾಗಿಯೂ ಬದಲಾಗಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಹಾಗೂ ನೀರಾವರಿ ಸೌಲಭ್ಯಕ್ಕೆ ಆದ್ಯತೆ ಒದಗಿಸಲಾಗಿದೆ. ಕ್ಷೇತ್ರದ ಪ್ರಗತಿಗೆ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು, ಜನ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ, ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಎಸ್.ಟಿ.ಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ನರಸಿಂಹ ನಾಯಕ, ರಾಜ್ಯ ಉಪಾಧ್ಯಕ್ಷರಾದ ಸಿ.ಪಿ.ಪಾಟೀಲ್, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ ತಳವಾರ ಸೇರಿದಂತೆ ಪಕ್ಷದ ಜಿಲ್ಲಾಸ್ಥರದ ಪದಾಧಿಕಾರಿಗಳು, ಮಂಡಲಾಧ್ಯಕ್ಷರು, ಎಸ್.ಟಿ.ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಉಮೇಶ ಬಂಕಾಪುರ ನಿರ್ವಹಿಸಿದರು. ಗೋಪಾಲಕೃಷ್ಣ ಗಾಂವ್ಕರ್ ವಂದಿಸಿದರು.