ಹೊನ್ನಾವರ: ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯ ಸಿದ್ದಾಪುರ, ಹೊನ್ನಾವರದಂತಹ ಪ್ರದೇಶದಲ್ಲಿ ಹೆಚ್ಚು ಆತಂಕ ಮೂಡಿಸುವ ಕಾಯಿಲೆಯಾದ ಮಂಗನ ಕಾಯಿಲೆ ಈ ಬಾರಿಯು ಕಾಡುವ ಭೀತಿ ಎದುರಾಗಿದೆ. ಸಿದ್ದಾಪುರ ದೊಡ್ಮನೆ ಪ್ರದೇಶದಲ್ಲಿ 3, ಗೇರುಸೊಪ್ಪೆಯಲ್ಲಿ 1 ಮಂಗ ಸಾವನ್ನಪ್ಪಿದ್ದು ಕಂಡುಬಂದಿದ್ದು, ಆರಂಭವಾಗಿರುವ ಬೇಸಿಗೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಅಪಾಯ ಹೆಚ್ಚಾಗಿರುತ್ತದೆ. ಈ ವರ್ಷವೂ ಆರೋಗ್ಯ ಇಲಾಖೆ ಲಸಿಕೆ ತಯಾರಿಸಲು ವಿಫಲವಾಗಿದ್ದು, ಕಾಡಿನಲ್ಲಿ ವಾಸಿಸುವ ಜನರು ಹೆಚ್ಚು ಕಾಳಜಿ ವಹಿಸಬೇಕಾದದ್ದು ಅನಿವಾರ್ಯ ಎಂದು ಕೆಎಫ್‌ಡಿ ಮತ್ತು ಎಂಡೋಸಲ್ಫಾನ್ ವಿಭಾಗಗಳನ್ನು ಜಿಲ್ಲೆಯಲ್ಲಿ ನೋಡಿಕೊಳ್ಳುತ್ತಿರುವ ವೈದ್ಯಾಧಿಕಾರಿ ಡಾ.ಸತೀಶ ಶೇಟ್ ಸಲಹೆ ನೀಡಿದ್ದಾರೆ.
ಈವರೆಗೆ 30 ಜ್ವರ ಪೀಡಿತ ಜನರ ರಕ್ತದ ಪರೀಕ್ಷೆ ಮಾಡಲಾಗಿದ್ದು, 13 ಉಣ್ಣೆಗಳನ್ನು ಸಂಗ್ರಹಿಸಿ ತಪಾಸಣೆ ಮಾಡಲಾಗಿದೆ. ಮಂಗನ ಕಾಯಿಲೆ ವೈರಾಣುಗಳು ಇಲ್ಲಿ ಕಾಣಿಸಿಕೊಂಡಿಲ್ಲ. ಮಂಗನ ಕಾಯಿಲೆ ತಡೆಯುವ ಮುನ್ನೆಚ್ಚರಿಕೆಯ ಕ್ರಮವಾಗಿ ದನಗಳ ಮೈಗೆ ಅಂಟಿಕೊಳ್ಳುವ ಉಣ್ಣಿಗಳನ್ನು ನಿವಾರಿಸುವ ಕ್ರಮವನ್ನು ಪಶುವೈದ್ಯಕೀಯ ಇಲಾಖೆ ಅಲ್ಲಲ್ಲಿ ಕೈಗೊಂಡಿದೆ. ಮಂಗನ ಕಾಯಿಲೆ ಸಂಭವನೀಯ ಸಿದ್ದಾಪುರ, ಹೊನ್ನಾವರ, ಶಿರಸಿ, ಭಟ್ಕಳ, ಅಂಕೋಲಾ, ಕುಮಟಾ, ಜೊಯಿಡಾ ತಾಲೂಕುಗಳ ಕಾಡಿನ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಆರೋಗ್ಯ ಕೇಂದ್ರಗಳಲ್ಲಿ ಡಿಎಪಿ ತೈಲವನ್ನು ಒದಗಿಸಲಾಗಿದ್ದು, ಅನಿವಾರ್ಯವಾಗಿ ಕಾಡಿಗೆ ಹೋಗುವವರು ಈ ತೈಲವನ್ನು ಕಾಲಿಗೆ ಲೇಪಿಸಿಕೊಂಡು ಹೋಗಬೇಕು. ಮನೆಗೆ ಬಂದ ಮೇಲೆ ಬಿಸಿನೀರಿನ ಸ್ನಾನ ಮಾಡಬೇಕು ಎಂದು ಇಲಾಖೆ ಹೇಳಿದೆ.ಕಾಡಿನಿಂದ ತರಗೆಲೆ ತರುವುದು ಅಪಾಯಕಾರಿಯಾಗಿದ್ದು, ಕಳೆದ ವರ್ಷ ಮಂಗಗಳು ಸತ್ತ ಮತ್ತು ಮಂಗನ ಕಾಯಿಲೆ ಪೀಡಿತ ಪ್ರದೇಶದ ಕಾಡಿಗೆ ಹೋಗಿ ಯಾರೂ ತರಗೆಲೆ ಅಥವಾ ಕಟ್ಟಿಗೆ ಸಂಗ್ರಹಿಸಬಾರದು ಎಂದು ಇಲಾಖೆ ಹೇಳಿದೆ.
ಈಗಾಗಲೇ ಹಳ್ಳಿಗಳಲ್ಲಿ ಮನೆಮನೆಗೆ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಕುರಿತು ಕರಪತ್ರವನ್ನು ತಲುಪಿಸಲಾಗಿದೆ. ವೈದ್ಯರ ಮತ್ತು ಪ್ರಮುಖರ ಸಭೆ ನಡೆಸಿ ಮುನ್ಸೂಚನೆ ನೀಡಲಾಗಿದೆ. ಕಾಡಿನ ಪ್ರದೇಶದಲ್ಲಿರುವವರು ಯಾವುದೇ ಜ್ವರ ಬಂದರೂ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಮಂಗನ ಕಾಯಿಲೆಯಾಗಿದ್ದರೆ ಕಾಯಿಲೆ ತೀವ್ರವಾಗಿದ್ದರೆ ಮಣಿಪಾಲದಲ್ಲಿ ಉಚಿತವಾಗಿ ಸರ್ಕಾರ ಚಿಕಿತ್ಸೆಯ ವ್ಯವಸ್ಥೆ ಮಾಡಿದೆ ಎಂದು ಡಾ.ಸತೀಶ ಮಾಹಿತಿ ನೀಡಿದ್ದು, ಮಂಗನ ಕಾಯಿಲೆಯ ಕುರಿತು ಗಾಬರಿ ಬೇಡ, ಆದರೆ ಕಾಳಜಿ ಇರಲಿ ಎಂದು ಸಲಹೆ ನೀಡಿದ್ದಾರೆ.