ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಕಂಪ್ಲಿ ಶ್ರೀಮಹಿಷಾಸುರ ಮರ್ದಿನಿ ದೇವಿಯ ಜಾತ್ರಾ ಮಹೋತ್ಸವ ಮಾ.27ರಿಂದ ಏ.2ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾ.27ರಂದು ಶ್ರೀದೇವಿ ಆವರಣ ಉತ್ಸವ, ಗಣಹವನ, ಶತಚಂಡಿ ಪಾರಾಯಣದ ಪ್ರಯುಕ್ತ ಬ್ರಹ್ಮಕೂರ್ಚ ಹೋಮ, ಗಣಪತಿ ಪೂಜೆ, ಪುಣ್ಯಾಹವಾಚನ, ನಾಂದಿ, ಪ್ರಧಾನ ಸಂಕಲ್ಪ, ಋತ್ವಿಗ್ವರಣ, ಮಾತೃಕಾಪೂಜನ, ಚಂಡಿ ಪಾಠ, ರುದ್ರಪಾರಾಯಣ, ಯಾಗಶಾಲಾ ಪ್ರವೇಶ, ಅಗ್ನಿಜನನ, ಕಲಶ ಸ್ಥಾಪನೆ, ರಾಜೋಪಚಾರ ಪೂಜೆ ನಡೆಯಲಿದೆ. 28ರಂದು ಗಣಪತಿ ಪೂಜೆ, ಪುಣ್ಯಾಹವಾಚನ, ಲಘುರುದ್ರಹವನ, ಶತಚಂಡೀ ಹವನ, ಪೂರ್ಣಾಹುತಿ, ಅನ್ನಸಂತರ್ಪಣೆ, ಶ್ರೇಯಸಂಪಾದನೆ ನಡೆಸಲಾಗುವುದು.
ಜಾತ್ರೆಯ ಸಂದರ್ಭದಲ್ಲಿ ಸ್ವರ್ಣವಲ್ಲಿಯ ಪೂಜ್ಯ ಗಂಗಾಧರೇoದ್ರ ಸರಸ್ವತೀ ಸ್ವಾಮಿಗಳು ಆಗಮಿಸಲಿದ್ದು ಪಾದುಕಾಪೂಜೆ, ಆಶೀರ್ವಚನ, ಮಂತ್ರಾಕ್ಷತ ಗ್ರಹಣ ನಡೆಯಲಿದೆ. 28ರಂದು ಮಧ್ಯಾಹ್ನ ಪೂರ್ಣಾಹುತಿಯ ನಂತರ ರಾತ್ರಿ 9ರವರೆಗೆ ಹಾಗೂ 29ರಿಂದ ಪ್ರತಿದಿನ ಬೆಳಿಗ್ಗೆ 8.30ರಿಂದ ರಾತ್ರಿ 9ರವರೆಗೆ ಶ್ರೀದೇವಿಯಲ್ಲಿ ಹಣ್ಣು ಕಾಯಿ, ಉಡಿ, ಕುಂಕುಮ ಅರ್ಚನೆ, ತುಲಾಭಾರ ಸೇವೆ ಹಾಗೂ ಹರಕೆ ಸೇವೆಗಳು ನಡೆಯುತ್ತವೆ. ಪ್ರತಿದಿನ ಮಧ್ಯಾಹ್ನ ಕೂಷ್ಮಾಂಡ ಬಲಿ ಸೇವೆ, ಪ್ರತಿದಿನ ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ರಾಜ ಉಪಚಾರ ಪೂಜೆಯೊಂದಿಗೆ ಶ್ರೀದೇವಿಯಲ್ಲಿ ಪ್ರಾರ್ಥನೆಗೈದು, ಜಾತ್ರೆಯ ನಿಮಿತ್ತ ಪ್ರತಿದಿನ ಮಧ್ಯಾಹ್ನ ಅನ್ನಪ್ರಸಾದ ನೀಡಲಾಗುವುದು ಸಂಜೆಯಿoದ ಮಹಾಮಂಗಳಾರತಿಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಿಯ ಸನ್ನಿಧಿಯಲ್ಲಿ ನಡೆಯಲಿದೆ. ಏ.2ರಂದು ಸಂಜೆ ಶ್ರೀದೇವಿಯ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.