ಶಿರಸಿ: ಅರಿವು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೆಗಡೆಕಟ್ಟಾ, ಅರಿವು ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಸಂಸ್ಥೆ ಶಿರಸಿ ಭಾರತ ಸೇವಾದಳ ಶಿರಸಿ, ಆರೋಗ್ಯ ಇಲಾಖೆ ಶಿರಸಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಧಾನ ಸರಕಾರಿ ಅಭಿಯೋಜಕಿ ಶ್ರೀಮತಿ ತನುಜಾ ಹೊಸಪಟ್ಟಣ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹೆಣ್ಣು ಹೆಣ್ಣಿಗೆ ಶತ್ರುವಾಗದೇ ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಇವತ್ತು ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಸೇವೆಯನ್ನು ಮಾಡುತ್ತಿರುವುದನ್ನು ಕೊಂಡಾಡಿ ಶುಭಾಶಯ ತಿಳಿಸಿದರು. ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿಗಳಾದ ಪ್ರೊ. ಕೆ.ಎನ್. ಹೊಸಮನೆ ಮಹಿಳಾ ಪಿಡುಗು, ಚಿತ್ರ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡುತ್ತ ಮಹಿಳೆಯರೆಲ್ಲ ಉತ್ತಮ ರೀತಿಯಲ್ಲಿ ಕೆಲಸ ಮಾಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಹಲವು ರಂಗಗಳಲ್ಲಿ ಹೆಣ್ಣು ಮುಂದುವರೆದರು. ಆಕೆ ಶೋಷಣೆಗೆ ಒಳಗಾಗುತ್ತಿದ್ದು ಅದು ನಿಲ್ಲಬೇಕು ಆಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುವದು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ, ಡಾ|| ವಿನಾಯಕ ಭಟ್ಟ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ, ಶ್ರೀಮತಿ ಗೌರಿ ನಾಯ್ಕ, ರಾಮಚಂದ್ರ ಹೆಗಡೆ, ಕುಮಾರ ಎಸ್. ನಾಯ್ಕ ವಕೀಲರು, ಶ್ರೀಮತಿ ಸಾವಿತ್ರಿ ಹೆಗಡೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಆರ್. ಎಸ್. ಭಟ್ಟ, ಆರ್. ಎನ್. ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸರಸ್ವತಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ನಡೆಸಿದ ಹಲವು ಸ್ಪರ್ಧೆಗಳಾದ ಚುಕ್ಕೆ ರಂಗೋಲಿ, ಮಹಿಳಾ ಪಿಡುಗು ಚಿತ್ರ, ಸಂಸಾರದ ಸಂಸ್ಕಾರದಲ್ಲಿ ಮಹಿಳೆಯರ ಪಾತ್ರ, ಪ್ರಬಂಧ ಸ್ಪರ್ಧೆ, ಬೆರಳಚ್ಚು, ಶೀಘ್ರಲಿಪಿ, ಗಣಕಯಂತ್ರ ಇವುಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಸುಮಂಗಲಾ ಭಟ್ಟ ನಾಡಗೀತೆ ಹಾಡಿದರು. ಸ್ವಾಗತವನ್ನು ದೀಪ್ತಿ ಚಂದಾವರಕರ ಪ್ರಾಸ್ತಾವಿಕವಾಗಿ ಸಂಜನಾ ನಾಯ್ಕ ಮಾಡಿದರೆ ವಂದನಾರ್ಪಣೆ ನಿರೀಕ್ಷಾ ನಾಯ್ಕ ಮಾಡಿದರು.
ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.