ಕಾರವಾರ: ರಂಗು ರಂಗಿನ ಹೋಳಿ ಹಬ್ಬವನ್ನು ಜಿಲ್ಲೆಯಾದ್ಯಂತ ಮಂಗಳವಾರ ಸಂಭ್ರಮ– ಸಡಗರದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಯುವಕರ ಗುಂಪುಗಳು ವಿವಿಧೆಡೆಗಳಲ್ಲಿ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿತ್ತು. ದಾರಿ ಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.
ನಗರದ ಕೋಣೆವಾಡ, ಕಳಸವಾಡ ಮತ್ತಿತರ ಕಡೆಗಳಲ್ಲಿ ಗುಜರಾತಿ ಹಾಗೂ ರಾಜಸ್ಥಾನಿಗಳು ಹೋಳಿಯನ್ನು ವಿಶೇಷವಾಗಿ ಆಚರಿಸಿದರು. ಎಲ್ಲರೂ ಒಂದೆಡೆ ಸೇರಿ ವಿಶೇಷ ಪಾಯಸ ಸವಿದು ಮೈಮರೆತು ಕುಣಿದು ಕುಪ್ಪಳಿಸಿದರು. ಪುರುಷರು ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರೆ, ಮಹಿಳೆಯರು ಹೋಳಿಯ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕಿದರು.
ಇನ್ನು ಒಂದು ವಾರದಿಂದ ಸುಗ್ಗಿ ಮೇಳ ಕಟ್ಟಿ ತಿರುಗಾಟ ನಡೆಸಿದವರು ಹೋಳಿ ಹಬ್ಬದ ದಿನ ವರ್ಷದ ಸುಗ್ಗಿಯ ಸಡಗರಕ್ಕೆ ವಿದಾಯ ಹೇಳಿದರು. ಕಾರವಾರದ ಹಬ್ಬುವಾಡ, ಅಂಬೇಡ್ಕರ್ ವೃತ್ತ, ಗೀತಾಂಜಲಿ ಚಿತ್ರಮಂದಿರದ ಬಳಿ ಬಣ್ಣ ಹಚ್ಚಲೆಂದೇ ಯುವಕರ ತಂಡ ನೆರೆದಿತ್ತು. ಕುಂಠಿ ಮಹಾಮಾಯಿ ದೇವಸ್ಥಾನ, ಕಾಜುಬಾಗ ಮತ್ತಿತರ ಕಡೆಗಳಲ್ಲಿ ಯುವಕ, ಯುವತಿಯರು ಸಿನಿಮಾ ಹಾಡುಗಳಿಗೆ ಹಜ್ಜೆ ಹಾಕುತ್ತ ಓಕುಳಿ ಆಡಿದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಓಕುಳಿಯಾಡಿದ ಜನರು ಜಿಲ್ಲೆಯ ವಿವಿಧ ಕಡಲತೀರಗಳಿಗೆ ತೆರಳಿ ಸಮುದ್ರ ಸ್ನಾನ ಮಾಡಿದರು. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಾವಿರಾರು ಜನ ಮಿಂದೆದ್ದು ಖುಷಿಪಟ್ಟರು.
ಕಡಲತೀರದಲ್ಲಿಯಾವುದೇ ಅವಘಡ ಆಗದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಜೀವ ರಕ್ಷಕ ಸಿಬ್ಬಂದಿ ಕಣ್ಗಾವಲು ಇರಿಸಿದ್ದರು. ಹೋಳಿ ಹಬ್ಬದ ನಿಮಿತ್ತ ಬೆಳಿಗ್ಗೆಯಿಂದಲೇ ಕಾರವಾರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಅಘೋಷಿತ ಬಂದ್ ಮಾಡಲಾಗಿತ್ತು. ಇದರಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪಮಟ್ಟಿನ ಅಸ್ತವ್ಯಸ್ತ ಉಂಟಾಯಿತು. ಪ್ರಮುಖ ಬೀದಿಗಳಲ್ಲಿ ಓಕುಳಿಯಾಟದಲ್ಲಿ ತೊಡಗಿದ್ದ ಹುಡುಗರ ಗುಂಪು ಬಿಟ್ಟರೆ ಜನಸಂಚಾರವೂ ವಿರಳವಾಗಿತ್ತು. ಸಂಜೆಯ ನಂತರ ಕೆಲವು ಹೋಟೆಲ್, ಮಳಿಗೆಗಳು ತೆರೆದು ವ್ಯಾಪಾರ ನಡೆಸಿದವು.