ಶಿರಸಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ವಚ್ಚತೆಗೆ ಒತ್ತು ನೀಡಿ ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನಸಭಾ ಸಭಾಧ್ಯಕ್ಷರು ಹಾಗೂ ಶಿರಸಿ ಸಿದ್ಧಾಪುರ ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಶನಿವಾರ ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತ್‌ನ ಕಸ ವಿಲೇವಾರಿ ಘನತ್ಯಾಜ್ಯ ಘಟಕ ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನಲ್ಲಿ 32 ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದಂತೆ 22 ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿನ ಕಸವು ಘಟಕವನ್ನು ಸೇರುವಂತೆ ಮಾಡುವುದು ತಮ್ಮೆಲ್ಲರ ಕರ್ತವ್ಯವಾದರೆ, ಅದರ ನಿರ್ವಹಣೆಯು ಪಂಚಾಯತ್ ಜವಾಬ್ದಾರಿಯಾಗಿದೆ. ಹಾಗಾಗಿ ತಾವೆಲ್ಲರೂ ಒಟ್ಟಾಗಿ ಸ್ವಚ್ಚತೆ ಕಾಪಾಡಲು ಸಹಕರಿಸಬೇಕಿದೆ ಎಂದರು.
ಪರಿಸರ ಕಾಪಾಡುವ ನಿಟ್ಟಿನಲ್ಲಿ ರಕ್ಷಣೆಗೆ ಈ ಘಟಕ ಸ್ಥಾಪನೆ, ಕಸ ನಿರ್ವಹಣೆಯ ಜವಾಬ್ದಾರಿ, ಹಾಗೂ ಕಸ ನಿರ್ಲಕ್ಷದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಸ್ವಚ್ಚತೆಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಶಿವಳ್ಳಿ, ದೇವನಳ್ಳಿ ಹಾಗೂ ಮತ್ತಿಘಟ್ಟಾ ಭಾಗದ ಜನರು ಕಸ ವಿಲೇವಾರಿ ಮಾಡಿ, ಘಟಕದ ಯಶಸ್ಸಿಗೆ ನೀವು ಸಹಕರಿಸಿ ನಿಭಾಯಿಸಬೇಕಿದೆ. ಇದು ನಿಮ್ಮ ಸಾಮಾಜಿಕ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೇವರಾಜ್ ಹಿತ್ತಲಕೊಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ತಾಲೂಕು ಐಇಸಿ ಸಂಯೋಜಕರು, ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.