ಜೋಯಿಡಾ: ತಾಲೂಕಿನಲ್ಲಿ ಬುಡಕಟ್ಟು ಕುಣಬಿಗಳ ಜಾನಪದ ಸಾಂಪ್ರದಾಯಿಕ ಹೋಳಿ ಹಬ್ಬ ಪ್ರಾರಂಭವಾಗಿದೆ. ಧರಿಸಿ ಸ್ವಗ್ರಾಮದಲ್ಲಿ ಕೋಲಾಟ ಆಡಿದ ನಂತರ ನೆರೆಯ ಗ್ರಾಮಗಳಿಗೆ ಆಡುವುದರೊಂದಿಗೆ ಐದು ದಿನಗಳ ಹೋಳಿ ಹಬ್ಬದ ಪ್ರಯುಕ್ತ ವಿಶೇಷವಾಗಿ ನಡೆಯುವ ಸುಗ್ಗಿ ಕುಣಿತ ಕೋಲಾಟ ತಂಡಗಳೂ ಎಲ್ಲೆಡೆ ಕಾಣಬಹುದಾಗಿದೆ.
ಹೋಳಿ ಹುಣ್ಣಿಮೆಯ ಏಕಾದಶಿ ದಿನದಿಂದ ಪ್ರಾರಂಭವಾಗುವ ಸುಗ್ಗಿ ಕುಣಿತ ದ್ವಾದಶಿ ದಿನದಂದು ಬೇರೆ ಗ್ರಾಮಗಳಿಗೆ ತಂಡಗಳು ಹೊರಡುತ್ತವೆ. ದ್ವಾದಶಿ ದಿನದಂದು ಪ್ರತಿ ವರ್ಷದಂತೆ ಬೇರೆ, ಬೇರೆ ಭಾಗಗಳಿಂದ ಆಗಮಿಸುತ್ತಾರೆ. ಮೊದಲು ಗ್ರಾಮದ ದೇವರ ಮನೆಯಲ್ಲಿ ಹೋಳಿ ಆಡಿದ ನಂತರ ಇತರ ಮನೆ ಅಂಗಳದಲ್ಲಿ ತಂಡಗಳು ಆಡುತ್ತವೆ.
ಪ್ರತಿ ಮನೆಯಲ್ಲೂ ಹೋಳಿ ತಂಡಗಳು ಕೊಂಕಣಿ ಭಾಷೆಯಲ್ಲಿ ಸಾಂಪ್ರದಾಯಿಕ ಹೋಳಿ ಹಬ್ಬದ ಹಾಡುಗಳನ್ನು ಹಾಡುತ್ತಾರೆ. ಈಶ್ವರ,ಪಾರ್ವತಿ ದೇವಿಯು ಹಾಡುಗಳು, ಪರಿಸರ,ಕಾಡು, ನದಿ ಮೂಲ, ಹೂವು ಹೀಗೆ ವಿವಿಧ ರೂಪಗಳಲ್ಲಿ ಸಾಂಪ್ರದಾಯಿಕ ಹಾಡುಗಳನ್ನು ಹಾಡಲಾಗುತ್ತದೆ. ಪ್ರತಿ ಮನೆಯಲ್ಲೂ ತಂಡಗಳಿಗೆ ಕಾಣಿಕೆಯನ್ನು ನೀಡಿ ಗೌರವಿಸಲಾಗುತ್ತದೆ. ಕುಣಬಿಗಳ ಹೋಳಿ ಹಬ್ಬದ ಸಂದರ್ಭದಲ್ಲಿ ಎರಡು ಬಗೆಯಲ್ಲಿ ತಂಡಗಳೂ ಇರುತ್ತದೆ. ಒಂದು ಕೋಲಾಟ ತಂಡವಾದರೆ ಇನ್ನೊಂದು ದೇವರು ಮೈಮೇಲೆ ಬಂದೂ ತಲವಾರಿ ಹಿಡಿದು ನರ್ತಿಸುವ ಹಿರಾಣ ತಂಡ ಇರುತ್ತದೆ.
ತಾಲೂಕಿನ ಅಣಶಿ, ಕುಮಗಾಳ, ಕುಂಡಲ, ಕೆಲೋಲಿ, ಕಾರಸಿಂಗಳ, ಕುಶಾವಲಿ, ಸಿಸೈ, ಪಾಟ್ನೆ, ಕಾಳಸಾಯಿ, ಗುಂದ, ಮೈನೋಳ, ಬೊಂಡೇಲಿ, ಕಾರಟೋಳಿ, ಪಾತಾಗುಡಿ ಹೀಗೆ ಅನೇಕ ಕುಣಬಿ ಗ್ರಾಮಗಳಲ್ಲಿ ಹೋಳಿ ತಂಡಗಳು ಪ್ರಮುಖವಾಗಿದೆ.