ಜೊಯಿಡಾ: ತಾಲೂಕಿನ ಕೆಲ ಕಡೆಗಳಲ್ಲಿ ಕಳಪೆ ಗುಣಮಟ್ಟದ ರೇಷನ್ ಅಕ್ಕಿ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸರ್ಕಾರ ಬಡವರಿಗೆ ಉತ್ತಮ ಗುಣಮಟ್ಟದ ಅಕ್ಕಿ ವಿತರಣೆ ಮಾಡಲಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಸರ್ಕಾರ ಉತ್ತಮಗುಣಮಟ್ಟದ ರೇಷನ್ ಅಕ್ಕಿಯನ್ನು ನೀಡಬೇಕು, ಜೋಯಿಡಾ ತಾಲೂಕಿನ ಕೆಲ ಕಡೆಗಳಲ್ಲಿ ಪೋರ್ಟಿಪೈಡ್ ಅಕ್ಕಿ ಎನ್ನುವ ಹೆಸರಿನಲ್ಲಿ ಊಟಕ್ಕೆ ಯೋಗ್ಯವಲ್ಲದ ಅಕ್ಕಿ ನೀಡಿದ್ದಾರೆ ಎಂಬ ಮಾಹಿತಿ ಇದೆ, ಬಡವರಿಗೆ ಎರಡು ಹೊತ್ತು ಗಂಜಿ ಮಾಡಿ ಕುಡಿಯಲು ಆಗದ ಪೋರ್ಟಿಪೈಡ್ ಅಕ್ಕಿ ಯಾಕೆ ಬೇಕು? ಕೂಡಲೇ ಸರ್ಕಾರ ಉತ್ತಮ ಅಕ್ಕಿಯನ್ನು ಜನರಿಗೆ ವಿತರಣೆ ಮಾಡಬೇಕು ಎಂದರು.
ಈ ತರಹದ ಅಕ್ಕಿ ನಮ್ಮ ತಾಲೂಕಿನಲ್ಲಿ ಮಾತ್ರ ನೀಡಲಾಗಿದೆಯೋ ಅಥವಾ ಜಿಲ್ಲೆ, ರಾಜ್ಯದಲ್ಲಿಯೂ ವಿತರಣೆ ಆಗುತ್ತಿದೆಯೋ ಎಂಬುದನ್ನು ಜಿಲ್ಲಾಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊಡುವ 5 ಕೆ.ಜಿ ಅಕ್ಕಿಯು ಗುಣಮಟ್ಟವಾಗಿಲ್ಲ ಎಂದಾದರೆ ಬಡವರು ಹೇಗೆ ಜೀವನ ಮಾಡಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ ಜನರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಈಗಿನ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನಮ್ಮ ತಾಲೂಕಿನಲ್ಲಿ ಸರಿಯಾದ ಊಟಕ್ಕೆ ಯೋಗ್ಯವಾದ ಅಕ್ಕಿ ವಿತರಣೆ ಮಾಡಬೇಕು ಇಲ್ಲವಾದರೆ, ಕಳಪೆ ಅಕ್ಕಿ ನೀಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕೆಪಿಸಿ ಸದಸ್ಯ ಸದಾನಂದ ದಬ್ಗಾರ, ಮಾಜಿ ಜಿ.ಪಂ. ಸದಸ್ಯ ರಮೇಶ ನಾಯ್ಕ ಇತರರು ಉಪಸ್ಥಿತರಿದ್ದರು.