ಯಲ್ಲಾಪುರ: ಭಕ್ತ ಸಾಗರದ ಜಯ ಘೋಷಗಳು, ವಿವಿಧ ಡೋಲು ಬಡಿತ, ಜಾಂಜ್ ಪತ್‌ಗೆ ಹೆಜ್ಜೆ ಹಾಕುವ ಭಕ್ತಗಣ, ಜೋಗತಿಯರ ನೃತ್ಯಗಳ ಮಧ್ಯೆ ಪ್ರತಿ ಮೂರು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಆಚರಿಸುವ ಗ್ರಾಮದೇವಿಯರ ಜಾತ್ರೆ ಗುರುವಾರ ಸಂಜೆ ಸಕಲ ವಿಧಿ- ವಿಧಾನಗಳೊಂದಿಗೆ ಮುಕ್ತಾಯವಾಯಿತು.
ಫೆ.22ರಿಂದ ಭಕ್ತಿ- ಭಾವದೊಂದಿಗೆ ಅದ್ಧೂರಿಯಾಗಿ 9 ದಿನಗಳ ಕಾಲ ನಡೆದ ಜಾತ್ರೆ ಮಾ.2ರಂದು ಮುಕ್ತಾಯವಾಯಿತು. ಗುರುವಾರ ಸಂಜೆ 4 ಗಂಟೆಗೆ ಜಾತ್ರಾ ಗದ್ದುಗೆಯಿಂದ ಎದ್ದ ಕಾಳಮ್ಮದೇವಿ ಹಾಗೂ ದುರ್ಗಮ್ಮ ದೇವಿಯರು, ಗಾಂಧಿ ವೃತ್ತದಿಂದ ಸಂಭ್ರಮ ಹೊಟೇಲ್ ಮಧ್ಯ ಹಾಗೂ ಅಂಬೇಡ್ಕರ ವೃತ್ತದಿಂದ ಶಿರಸಿ ರಸ್ತೆಯ ಪೋಸ್ಟ್ ಆಫೀಸ್ ವರೆಗೆ ತುಸು ಹೆಚ್ಚು ಸಮಯ ಸುತ್ತು ಹಾಕಿದರು. ನಂತರ 4.50ಕ್ಕೆ ವಿಸರ್ಜನಾ ಗದ್ದುಗೆಯಲ್ಲಿ ಆಸೀನರಾದರು. ಮುಂಡಗೋಡ ರಸ್ತೆಯಲ್ಲಿರುವ ಜಾತ್ರಾ ವಿಸರ್ಜನಾ ಗದ್ದುಗೆಯಲ್ಲಿ ದೇವಿಯರನ್ನು ಕುಳ್ಳಿರಿಸಿ ಜಾತ್ರೆಯ ಅಂತಿಮ ಸಂಪ್ರದಾಯಗಳನ್ನು ನೆರವೇರಿಸಲಾಯಿತು. ತನ್ಮೂಲಕ ಅಧಿಕೃತವಾಗಿ ಜಾತ್ರಾ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಗುರುವಾರ ಸಾಯಂಕಾಲ ದೇವಿಯರಿಗೆ ಜಾತ್ರಾ ಗದ್ದುಗೆಯಲ್ಲಿ ಮಹಾ ಪೂಜೆಯ ನಂತರ ದೇವಸ್ಥಾನ ಸಮಿತಿಯ ಮಿರಾಶಿ ಮನೆತನದವರು ಯಲ್ಲಾಪುರ ಗ್ರಾಮ, ದೇಶ, ರಾಜ್ಯ ಹಾಗೂ ಧರ್ಮದ ಒಳಿತು ಮಾಡುವಂತೆ ದೇವರಲ್ಲಿ ಹೇಳಿಕೆ ಮಾಡಿಕೊಂಡರು. ಅನಂತರ ಗದ್ದುಗೆ ಮಂಟಪದ ಎದುರಿಗೆ ಕಟ್ಟಲಾದ ಹುಲ್ಲಿನ ಗುಡಿಸಲು ಮತ್ತು ಹಿಟ್ಟಿನ ಕೋಣನ ಆಕೃತಿಯನ್ನು ಸುಟ್ಟು, ಆ ಬೂದಿಯನ್ನು ದೇವಿಯರ ಪಾದದ ಮೇಲೆ ಸುರಿಯಲಾಯಿತು. ನಂತರ ಭಕ್ತರು ಮೆರವಣಿಗೆಯಲ್ಲಿ ದೇವಿಯರನ್ನು ತಲೆಯ ಮೇಲೆ ಹೊತ್ತು ಮುಂಡಗೋಡ ರಸ್ತೆಯಲ್ಲಿರುವ ವಿಸರ್ಜನಾ ಗದ್ದುಗೆಗೆ ನಗರದ ಮುಖ್ಯ ರಸ್ತೆ ಮೂಲಕ ಹಿಂದೆ ಮುಂದೆ ಸಾಗುತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯ ಆವರಣದ ಮೂಲಕ ತೆಗೆದುಕೊಂಡು ಹೋಗಿ ದೇವಿಯರನ್ನು ಕುಳ್ಳಿರಿಸಲಾಯಿತು
ಜಾತ್ರಾ ಗದ್ದುಗಯಿಂದ ವಿಸರ್ಜನಾ ಗದ್ದುಗೆಗೆ ದೇವಿಯರು ತೆರಳುವ ಸಂದರ್ಭದಲ್ಲಿ ಪಿಐ ರಂಗನಾಥ, ಪಿಎಸ್‌ಐ ರವಿ ಗುಡ್ಡಿ ಹಾಗೂ ಸಿಬ್ಬಂದಿ ಜಾತ್ರೆಗೆ ಬಂದ ಭಕ್ತರಿಗೆ ಹಾಗೂ ದೇವರು ಗದ್ದುಗೆಗೆ ತೆರಳುವಾಗ ಎಲ್ಲಾ ರೀತಿಯ ಭದ್ರತೆ ಒದಗಿಸಿದ್ದರು.
ರಾತ್ರಿ ಆಚರಣೆ
ದೇವಿಯರನ್ನು ವಿಸರ್ಜನಾ ಗದ್ದುಗೆಯಲ್ಲಿ ಕುಳ್ಳಿರಿಸಿದ ನಂತರ ಮಧ್ಯರಾತ್ರಿಯವರೆಗೆ ಸಹಸ್ರ ನಾಮಗಳಿಂದ ಭಜಿಸಿ, ದೇವಿಯರಿಗೆ ಭೂಲೋಕದ ಪರೋಕ್ಷ ಬಂಧನದಿಂದ ಮುಕ್ತಿಗೊಳಿಸುವುದು ಎಂಬ ಭಾವನೆಯಲ್ಲಿ ಲಗ್ನದ ಸಮಯದಲ್ಲಿ ತೊಡಿಸಿದ ಬಳೆಗಳನ್ನು ಒಡೆದು ಹಾಕಿ ಉತ್ಸವಕ್ಕೆ ಕೊನೆ ಹೇಳಲಾಗುತ್ತದೆ. ನಂತರ ದೇವಿಯರ ಆಭರಣಗಳನ್ನು ರಾತ್ರಿ 10 ಗಂಟೆಯ ಸುಮಾರಿಗೆ ದೇವಸ್ಥಾನಕ್ಕೆ ಸಕಲ ಭದ್ರತೆಯೊಂದಿಗೆ ತರಲಾಗುತ್ತದೆ.
ಉತ್ಸವದಿಂದ ಮುಕ್ತರಾದ ದೇವಿಯರನ್ನು ರಾತ್ರಿ 12 ಗಂಟೆಯ ನಂತರ ಸಾಮಾನ್ಯ ಜನತೆ, ಪುರೋಹಿತ ವರ್ಗ ಇವರನ್ನು ಬಿಟ್ಟು ಸೆಳೆ ದೇವರ ಮಿರಾಶಿ ಜನರು ಮಾತ್ರ ಕಾಳ ರಾತ್ರಿಯಲ್ಲಿ ಬಿದಿರಿನ ಪೆಟ್ಟಿಗೆಯಲ್ಲಿ ಇಟ್ಟು ದೇವಾಲಯಕ್ಕೆ ಮರಳಿ ತರುತ್ತಾರೆ. ದೇವಿಯರ ಮೂರ್ತಿಗಳನ್ನು ಮೂಲ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವಾಗ ಯಾರೂ ಅಡ್ಡ ಬರುವಂತಿಲ್ಲ, ಈ ಕುರಿತಂತೆ ಮೊದಲೇ ಪ್ರಕಟಣೆ ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯುತ್ ಸರಬರಾಜನ್ನು ನಿಲ್ಲಿಸಲಾಗುತ್ತದೆ. ವಾಹನ ಸಂಚಾರ ಕೂಡ ತಡೆ ಹಿಡಿಯಲಾಗುತ್ತದೆ. ಯಲ್ಲಾಪುರದ ಜನ ಈ ಸಂಪ್ರದಾಯವನ್ನು ಬಹಳಷ್ಟು ಭಯ- ಭಕ್ತಿಯಿಂದ ಪಾಲಿಸುತ್ತಾರೆ.
ದೇವಾಲಯಕ್ಕೆ ಬಂದ 10 ದಿನಗಳು ದೇವಿಯರಿಗೆ ಯಾವುದೇ ಪೂಜೆ ಪುನಸ್ಕಾರಗಳು ಇರುವುದಿಲ್ಲ. 11ನೇ ದಿನ(ಮಾ.13)ಕ್ಕೆ ದೇವಾಲಯದಲ್ಲಿ ವಿಧಿ ವಿಧಾನಗಳ ಮೂಲಕ ವಿಶ್ವಕರ್ಮ ಬ್ರಾಹ್ಮಣರು ಪೂಜೆ ಸಲ್ಲಿಸಿದ ಬಳಿಕ ಭಕ್ತರು ಎಂದಿನಂತೆ ಪೂಜೆ ಹರಕೆ ಸಲ್ಲಿಸಬಹುದಾಗಿದೆ.