• Slide
  Slide
  Slide
  previous arrow
  next arrow
 • ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ‘ನರ್ತನ ನಂದನ’ ಸಂಪನ್ನ

  300x250 AD

  ದಾಂಡೇಲಿ: ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಗರ ಶಾಖೆಯ ಆಶ್ರಯದಲ್ಲಿ ನಗರದ ಶ್ರೀವೀರಭದ್ರೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನರ್ತನ ನಂದನ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿತು.
  ನಗರದ ನಾಟ್ಯ ವಿದೂಷಿ, ಅದ್ಭುತ ಪ್ರತಿಭೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಗಿಟ್ಟಿಸಿ ನಾಡಿನೆಲ್ಲೆಡೆ ತಮ್ಮ ಕಾರ‍್ಯಕ್ರಮಗಳ ಮೂಲಕ ಜನಮೆಚ್ಚುಗೆ ಪಡೆದ ಅಮೃತಾ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ನಗರದ ಬಂಗೂರ ನಗರ ಜ್ಯೂನಿಯರ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ಪ್ರತಿಭಾ ದೇಶಪಾಂಡೆಯವರು ಉದ್ಘಾಟಿಸಿ ಮಾತನಾಡುತ್ತಾ, ಅಮೃತಾ ನಾಯ್ಕ ವಿಜ್ಞಾನ ತರಗತಿಯ ವಿದ್ಯಾರ್ಥಿನಿಯಾಗಿ ಭರತ ನಾಟ್ಯದಲ್ಲಿ ಇಷ್ಟೊಂದು ಸಾಧನೆ ಮಾಡಿ ದಾಂಡೇಲಿಗೆ ಕೀರ್ತಿ ತಂದಿರುವುದು ನಮಗೆಲ್ಲ ಅತೀವ ಹೆಮ್ಮೆ. ಈಕೆ ನನ್ನ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ಅತೀವ ಅಭಿಮಾನವೆನಿಸುತ್ತದೆ. ಕಲೆಗೆ ಆಸಕ್ತಿ ಮುಖ್ಯ. ಆಸಕ್ತಿಯಿಂದ ಕಲಿತ ವಿದ್ಯೆ ಉತ್ತಮ ವ್ಯಕ್ತಿತ್ವವನ್ನು ರೂಪುಗೊಳಿಸುತ್ತದೆ. ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಮೂಲಕ ಇಲ್ಲಿಯ ಮಕ್ಕಳಿಗೆ ಭರತ ನಾಟ್ಯವನ್ನು ಕಲಿಸುವ ಕಾರ‍್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದನ್ನು ಶ್ಲಾಘಿಸಿದರು.
  ಹಿರಿಯ ವಕೀಲ ಸೋಮಕುಮಾರ್ ಎಸ್. ಮಾತನಾಡಿ, ಭರತನಾಟ್ಯ ಕಲೆ ನಮ್ಮ ದೇಶದ ವಿಶಿಷ್ಟ ಪ್ರಕಾರದ ಸಾಂಸ್ಕೃತಿಕ ಕಲೆಯಾಗಿದ್ದು, ಭರತ ನಾಟ್ಯಕ್ಕೆ ತನ್ನದೇ ಆದ ಪರಂಪರೆಯಿದೆ. ಆ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.
  ಪತ್ರಕರ್ತ ಸಂದೇಶ್.ಎಸ್.ಜೈನ್ ಮಾತನಾಡಿ, ಕಲೆ, ಸಂಸ್ಕೃತಿ, ಉನ್ನತ ಸಂಸ್ಕಾರಗಳನ್ನು ಮೈಗೂಡಿಸಿಕೊಂಡ ವ್ಯಕ್ತಿ ಸಮಾಜದ ಆಸ್ತಿಯಾಗಬಲ್ಲ. ಭರತ ನಾಟ್ಯ, ಶಾಸ್ತ್ರೀಯ ಸಂಗೀತ ಇವೆಲ್ಲವುಗಳು ನಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಬಲ್ಲುದು. ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಭರತ ನಾಟ್ಯ, ಶಾಸ್ತ್ರೀಯ ಸಂಗೀತಗಳಂತಹ ತರಬೇತಿಯನ್ನು ಸಕಾಲದಲ್ಲಿ ನೀಡುವ ಮೂಲಕ ನಾವು ನಮ್ಮ  ನಿಜವಾದ ಕರ್ತವ್ಯವನ್ನು ಮಾಡಬೇಕೆಂದು ಕರೆ ನೀಡಿದರು.
  ವಿದ್ಯಾರ್ಥಿಗಳ ಪಾಲಕರ ಪರವಾಗಿ ಪ್ರಮೋದ್ ಪರೊಳಿಕರ ಅವರು ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ತನ್ನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ಭರತ ನಾಟ್ಯ ಹಾಗೂ ಇನ್ನಿತರ ನೃತ್ಯಪ್ರಕಾರಗಳನ್ನು ಕಲಿಸಿಕೊಡುತ್ತಿರುವುದಕ್ಕೆ ಪಾಲಕರಾದ ನಮಗೆಲ್ಲರಿಗೂ ಹೆಮ್ಮೆಯಿದೆ ಎಂದರು.
  ಕಾರ್ಯಕ್ರಮದ ರೂವಾರಿ ಅಮೃತಾ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಂದೆ, ತಾಯಿಯವರ ಆಶೀರ್ವಾದ, ಅಣ್ಣ, ಅತ್ತಿಗೆಯವರ ಪ್ರೀತಿ, ತುಂಬಿದ ಪ್ರೋತ್ಸಾಹ, ನೃತ್ಯಗುರು ಡಾ.ಸಹನಾ ಭಟ್ ಅವರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ವಿದ್ಯಾರ್ಥಿ ದೆಸೆಯಲ್ಲಿ ನಾನು ಕಲಿತ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕ ವೃಂದದವರು ನೀಡಿದ ಪ್ರೋತ್ಸಾಹ ಮತ್ತು ಸಹಕಾರ ಹಾಗೂ ಕೇಂದ್ರದ ಮಕ್ಕಳು ಮತ್ತು ಅವರ ಪಾಲಕರು, ದಾಂಡೇಲಿ ಜನತೆ ನೀಡಿದ ಮನೆ ಮಗಳ ಅಕ್ಕರೆಯ ಪ್ರೀತಿ, ಪ್ರೋತ್ಸಾಹವೆ ಭರತ ನಾಟ್ಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಯ್ತೆಂದು ಸಹಕರಿಸಿದ, ಪ್ರೋತ್ಸಾಹಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
  ಮುಖ್ಯ ಅತಿಥಿಗಳಾಗಿ ಶ್ರೀವೀರಭದ್ರೇಶ್ವರ ದೇವಾಲಯದ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಚನ್ನಬಸಪ್ಪ ಮುರುಗೋಡ ಅವರು ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ನೃತ್ತ ಗುರು ಡಾ.ಸಹನಾ ಭಟ್ ಅವರ ಅನುಪಸ್ಥಿತಿಯಲ್ಲಿ ಅವರ ಪತಿ ಪ್ರದೀಪ್ ಭಟ್ ಅವರಿಗೆ ಗುರುಗೌರವವನ್ನು ಸಮರ್ಪಿಸಲಾಯಿತು.

  ಕೇಂದ್ರದ ವಿದ್ಯಾರ್ಥಿಗಳು ಮತ್ತು ಪಾಲಕರ ವತಿಯಿಂದ ನೃತ್ಯ ಗುರು ಅಮೃತಾ ನಾಯ್ಕ ಅವರಿಗೆ ಗುರು ಗೌರವವನ್ನು ಅರ್ಪಿಸಲಾಯಿತು.
  ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷರಾದ ಪ್ರದೀಪ ಭಟ್ ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ಅಮೃತ ನಾಯ್ಕ ವಂದಿಸಿದರು. ಸವಿತಾ ಸುಬ್ರಹ್ಮಣ್ಯ ಪಡುಕೋಣೆ ಮತ್ತು ಸ್ಮೀತಾ ಗುರುರಾಜ್ ಅವರು ಕರ‍್ಯಕ್ರಮ ನಿರೂಪಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತ ನಾಟ್ಯ ಮತ್ತು ನೃತ್ಯ ರೂಪಕ ಕಾರ‍್ಯಕ್ರಮವು ನಡೆದು ಜನಾಕರ್ಷಣೆಗೆ ಪಾತ್ರವಾಯಿತು. ಕಾರ‍್ಯಕ್ರಮದ ಯಶಸ್ಸಿಗೆ ಚಂದ್ರಕಾಂತ ನಾಯ್ಕ, ತೇಜಾ ನಾಯ್ಕ ಮತ್ತು ಕೇಂದ್ರದ ವಿದ್ಯಾರ್ಥಿಗಳ ಪಾಲಕರು ಸಹಕರಿಸಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top