Slide
Slide
Slide
previous arrow
next arrow

ಸಾರ್ಥಕತೆಯ ಬದುಕನ್ನು ಬದುಕಿದವರು ದೊಡ್ಮನೆ ಗಣೇಶ ಹೆಗಡೆ: ಸಿಎಂ ಬೊಮ್ಮಾಯಿ

300x250 AD

ಸಿದ್ದಾಪುರ: ಆತ್ಮಸಾಕ್ಷಿ, ಕತೃತ್ವಶಕ್ತಿ, ಧೃಡವಾದ ನಂಬಿಕೆಯಿಂದ ಸಾರ್ಥಕತೆಯ ಬದುಕನ್ನು ಬದುಕಿದವರು ದೊಡ್ಮನೆ ಗಣೇಶ ಹೆಗಡೆಯವರು. ಅಧಿಕಾರವಿಲ್ಲದೇ ಜನಪರವಾದ ಹತ್ತು ಹಲವು ಕಾರ್ಯಗಳನ್ನು ಮಾಡಿದವರು ಅವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಪಟ್ಟಣದ ಸಿದ್ದಿವಿನಾಯಕ ವಿದ್ಯಾ ಸಮುಚ್ಛಯದಲ್ಲಿ ಗಣೇಶ ಹೆಗಡೆ ದೊಡ್ಮನೆ ಜನ್ಮಶತಮಾನೋತ್ಸವದ ಶತಸ್ಮೃತಿ ಕಾರ್ಯಕ್ರಮದಲ್ಲಿ ‘ಸೂರ್ಯವರ್ಚಸ್ವಿ’ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬದುಕಿದ್ದಾಗಲೂ, ಇಲ್ಲದಿರುವಾಗಲೂ ಪ್ರಸ್ತುತವಾಗಿದ್ದವರು ಗಣೇಶ ಹೆಗಡೆ.ನಮ್ಮ ನಡುವೆ ಜೀವಂತವಾಗಿ ಬದುಕಿದ ಸಾಧಕರು ಅವರು. ಅವರ ನೆನಪು ಸದಾ ಹಸಿರಾಗಿರುತ್ತದೆ ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಸಮಾಜವನ್ನು ಸಂಘಟಿಸಿದ, ಜಾಗೃತಗೊಳಿಸುವ ಕಾರ್ಯವನ್ನು ಮಾಡಿದವರು ಗಣೇಶ ಹೆಗಡೆಯವರು.ಜನಪ್ರತಿನಿಧಿಯಾಗದೇಯೂ ಜನ ಸಮೂಹಕ್ಕೆ ಬಹಳಷ್ಟು ಕೊಡುಗೆ ಕೊಟ್ಟವರು. ಅವರು ಆದರ್ಶಪ್ರಾಯರಾದವರು ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಮಾಜದ ಒಳಿತಿಗಾಗಿ ಶ್ರಮಿಸಿ, ಅಮೂಲ್ಯವಾದ ಕೊಡುಗೆಗಳನ್ನು ಕೊಟ್ಟವರು ಗಣೇಶ ಹೆಗಡೆಯವರು. ಅವರ ಆದರ್ಶ, ನಡೆದುಬಂದ ದಾರಿ ನಮಗೆ ಸ್ಫೂರ್ತಿ. ಗಣೇಶ ಹೆಗಡೆಯವರು ಯಾವತ್ತೂ ನಮ್ಮ ಜೊತೆಯಲ್ಲೇ ಇರುತ್ತಾರೆ ಎಂದರು.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ಗಣೇಶ ಹೆಗಡೆಯವರಲ್ಲಿ ದೂರದೃಷ್ಠಿ, ಕಾರ್ಯವನ್ನು ಸಾಧಿಸುವ ಶಕ್ತಿ, ಎಷ್ಟೇ ಅಡ್ಡಿ ಬಂದರೂ ದೃಢವಾಗಿ ಎದುರಿಸುವ ಸಾಮರ್ಥ್ಯ ಗಣೇಶ ಹೆಗಡೆಯವರಲ್ಲಿತ್ತು. ಬದಲಾವಣೆಯ ಈ ಕಾಲದಲ್ಲಿ ಗಣೇಶ ಹೆಗಡೆಯಂಥವರ ಅಗತ್ಯ ಇದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ, ಸಹೋದರರಾಗಿ ಹೇಗೆ ಬದುಕಬೇಕು ಎನ್ನುವದನ್ನು ಗಣೇಶ ಹೆಗಡೆ-ರಾಮಕೃಷ್ಣ ಹೆಗಡೆಯವರಿಂದ ತಿಳಿದುಕೊಳ್ಳುವಂತಿತ್ತು. ಗಣೇಶ ಹೆಗಡೆಯವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರು ಈಗ ಇಲ್ಲವಾದರೂ ಸಾವಿರಾರು ಜನರಿಗೆ ದಾರಿದೀಪವಾದವರು ಎಂದರು.
ರಾಮಕೃಷ್ಣ ಹೆಗಡೆಯವರ ಪುತ್ರಿ ನವನಿರ್ಮಾಣ ವೇದಿಕೆ ಅಧ್ಯಕ್ಷೆ ಮಮತಾ ನಿಚ್ಚಾನಿ ಮಾತನಾಡಿ, ಗಣೇಶ ಹೆಗಡೆಯವರ ಕ್ರಿಯಾಶೀಲತೆ, ದಕ್ಷತೆ ನೋಡುತ್ತ ಬೆಳೆದವಳು ನಾನು. ರಾಮಕೃಷ್ಣ ಹೆಗಡೆ ಹಾಗೂ ಗಣೇಶ ಹೆಗಡೆಯವರ ನಡುವಿನ ಸಂಬಂಧ ವಿವರಣೆಗೆ ನಿಲುಕದ್ದು. ಅವರು ಸಮಾಜದ ಆಸ್ತಿ ಎಂದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 9 ಇ- ಬುಕ್‌ಗಳನ್ನು ಬಿಡುಗಡೆಗೊಳಿಸಿ, ಎಂಜಿಸಿ ಕಾಲೇಜು ಎದುರಿನ ವೃತ್ತಕ್ಕೆ ಗಣೇಶ ಹೆಗಡೆ ವೃತ್ತ ಎಂದು ನಾಮಕರಣ ಮಾಡಿದರು. ಜನ್ಮ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಮೋದ ಹೆಗಡೆ ದಿಕ್ಸೂಚಿ ಮಾತನ್ನಾಡಿದರು. ಕಾರ್ಯಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಸ್ವಾಗತಿಸಿದರು. ಶ್ರೀಪಾದ ಹೆಗಡೆ ಸೋಮನಮನೆ ಪ್ರಾರ್ಥಿಸಿದರು. ವಿನೋದಾ ಭಟ್ಟ, ಟಿ.ಎನ್.ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಜಿ.ಕೆ.ಭಟ್ಟ ಕಶಿಗೆ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top