ಕುಮಟಾ: ಜಿಲ್ಲೆಯಲ್ಲಿ ಅನೇಕ ಮಹಾನ್ ಮೇರು ಕಲಾವಿದರು ಯಕ್ಷಗಾನಕ್ಕೆ ಬಹುಮುಖ್ಯ ಕೊಡುಗೆ ನೀಡಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.
ತಾಲೂಕಿನ ಸಂತೇಗುಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಚಿಣ್ಣರ ಯಕ್ಷಗಾನ ಮಂಡಳಿ ಸಂತೇಗುಳಿ ಇವರು ಆಯೋಜಿಸಿದ ಚಿಣ್ಣರ ರಂಗ ಪ್ರವೇಶ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಕ್ಷಗಾನ ಬೆಳೆಯುವಲ್ಲಿ ಉತ್ತರ ಕನ್ನಡದ ಪಾತ್ರ ಮಹತ್ತರವಾಗಿದೆ. ಉಡುಪಿಯಲ್ಲಿ ಹಿಂದೆಂದೂ ಆಗಿರದ ಯಕ್ಷಗಾನದ ಮೊಟ್ಟ ಮೊದಲ ವಿಶ್ವ ಸಮ್ಮೇಳನ ನಡೆಯಿತು. ಉತ್ತರ ಕನ್ನಡದಲ್ಲಿ ಮಾಡುವ ಒಳ್ಳೆಯ ಅವಕಾಶ ಇತ್ತು. ಆದರೆ ಇಲ್ಲಿಯ ಜಿಲ್ಲೆಯ ರಾಜಕಿಯ ನಾಯಕರ ನಿರಾಸಕ್ತಿಯಿಂದ ಅದು ಉಡುಪಿಯಲ್ಲಿ ನಡೆಯಿತು ಎಂದರು.
ಯಕ್ಷಗಾನ ಕುರಿತು ಎಮ್.ಜಿ.ಭಟ್ಟ ಕೂಜಳ್ಳಿ ಉಪನ್ಯಾಸ ನೀಡಿ ಯಕ್ಷಗಾನದಿಂದ ಚಿಣ್ಣರ ಬಾಷೆ ಶುದ್ದವಾಗುವುದರ ಒಟ್ಟಿಗೆ, ಸಬಾಕಂಪನ ದೂರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಬಾಗವತ ಜಿ.ಎಲ್.ನಾಯ್ಕ್, ಮದ್ದಲೆ ವಾದಕರಾದ ಸಿತಾರಾಮ್ ಆಚಾರಿ, ಯುವ ಯಕ್ಷಗಾನ ಕಲಾವಿದ ಲಕ್ಷ್ಮೀಶ ಈರಪ್ಪ ನಾಯ್ಕ, ನಾಗಪ್ಪ ನಾಯ್ಕ, ಕಾಳಪ್ಪ ಆಚಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಸುಬ್ರಾಯ ನಾಯ್ಕ, ಗ್ರಾಪಂ ಸದಸ್ಯರಾದ ವಿನಾಯಕ ಭಟ್, ಮಾದೆವಿ ಬಟ್, ಮಾಜಿ ಸೈನಿಕ ಗಜು ನಾಯ್ಕ, ಶಿವಾನಂದ ಗುನಗ, ಗಣೇಶ ಭಟ್ಟ ಬಗ್ಗೋಣ ಇತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ನಡೆದ ‘ಶ್ರೀ ರಾಮಾಶ್ವಮೇಧ’ ಎಂಬ ಪೌರಾಣಿಕ ಯಕ್ಷಗಾನವನ್ನು ಮಕ್ಕಳು ಸಾದರ ಪಡಿಸುವುದರ ಮೂಲಕ ಕಾರ್ಯಕ್ರಮವನ್ನು ಕಳೆಗಟ್ಟಿಸಿದರು. ಹಿಮ್ಮೇಳ ಭಾಗವತರಾಗಿ ಗಜಾನನ ನಾಯ್ಕ ಕೂಜಳ್ಳಿ, ಮೃದಂಗ ಸೀತಾರಾಮ ಆಚಾರಿ ಕಾಗಾಲ, ಚಂಡೆವಾದಕರಾಗಿ ರಮೇಶ ಮಾದನಗೇಲಿ ಸಾಥ್ ನೀಡಿದರು. ಮುಮ್ಮೇಳದಲ್ಲಿ ಚಿಣ್ಣರ ಕಲಿಕಾ ಮಕ್ಕಳಿಂದ ‘ಶ್ರೀ ರಾಮಾಶ್ವಮೇಧ’ ಪೌರಾಣಿಕ ಯಕ್ಷಗಾನ ಜನಮನ ಸೆಳೆಯಿತು.